ಬೆಂಗಳೂರು: ಬರವಣಿಗೆ, ಸೃಜನಶೀಲತೆ, ಸಾಹಿತ್ಯ ಇತ್ಯಾದಿ ಅಕ್ಷರ ಕೃಷಿಯಲ್ಲಿ ತೊಡಗಿಸಿಕೊಂಡವರು ಪರಿಸರದೊಂದಿಗೆ ಬೆರೆಯಬೇಕು. ಪರಿಸರದೊಂದಿಗೆ ಬೆರೆತವರಿಗೆ ಬರವಣಿಗೆಯ ಚೈತನ್ಯ ಬರುತ್ತದೆ ಎಂದು ಸಾಹಿತಿ ಶೂದ್ರ ಶ್ರೀನಿವಾಸ್ ಹೇಳಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತ ತುರುವನೂರು ಮಂಜುನಾಥ್ ರವರ ಅಂತರ್ಮಿಡಿತ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ತುರುವನೂರು ಮಂಜುನಾಥ ಪತ್ರಕರ್ತರಾಗಿ ಕೆಂಧೂಳಿ ಎಂಬ ನಿಯತಕಾಲಿಕದ ಮೂಲಕ ಪ್ರಚಲಿತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬದೊಂದಿಗೆ ಕೃಷಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತರಾದವರಿಗೆ ಸಾಹಿತ್ಯದ ಬಗ್ಗೆ ಅಭಿರುಚಿ ಇರಬೇಕು. ಪತ್ರಕರ್ತರಿಗೆ ಇಂತದ್ದೇ ಕ್ಷೇತ್ರ ಎಂಬ ಚೌಕಟ್ಟು ಇರುವುದಿಲ್ಲ. ಎಲ್ಲ ಕ್ಷೇತ್ರಗಳ ಬಗ್ಗೆ ಅರಿವು, ಆಸಕ್ತಿ ಇರಬೇಕು. ಆ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿರುವ ಕೆಂಧೂಳಿ ಪತ್ರಿಕೆಯ ಆಯ್ದ 32 ಲೇಖನಗಳ ಸಂಗ್ರಹವೇ ಅಂತರ್ಮಿಡಿತ ಗ್ರಂಥ. ಲಂಕೇಶ್ ಅವರು ಪತ್ರಕರ್ತರಾದವರು ಹೇಗಿರಬೇಕೆಂಬ ಹೊಸ ದೃಷ್ಟಿಕೋನವನ್ನು ನೀಡಿದವರು. ಲಂಕೇಶ್ ಅವರ ಶಿಸ್ತು, ತೀವ್ರತೆಯನ್ನು ಅರಿತು ಅಳವಡಿಸಿಕೊಂಡು ಆ ಪ್ರೇರಣೆಯಲ್ಲೇ ಪತ್ರಿಕೆ ಆರಂಭಸಿದವರು ಸಾಕಷ್ಟಿದ್ದಾರೆ ಎಂದು ಶ್ರೀನಿವಾಸ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಹಾಗೂ ಅಂಕಣಕಾರ ದಾದಾಫೀರ್ ನವಿಲೇಹಾಳ್ ಮಾತನಾಡಿ, ಇಂದಿನ ಹಲವಾರು ತಲ್ಲಣಗಳ ನಡುವೆ ವಿಷಯದ ಆಯ್ಕೆ ದೊಡ್ಡ ಸವಾಲು. ಆಯಾ ಕಾಲಮಾನದ ಚರ್ಚಿತ ವಿಷಯಗಳನ್ನು ಪತ್ರಿಕೆಗಳಲ್ಲಿ ಬರೆದರೂ, ಮುಂದಿನ ಕಾಲಕ್ಕೂ ಅದು ಮಾರ್ಗದರ್ಶನವಾಗುವ ನಿಟ್ಟಿನಲ್ಲಿ ಪತ್ರಕರ್ತರ ಗಮನ ಮತ್ತು ಶ್ರಮ ಇರಬೇಕು. ಸಮಕಾಲೀನತೆಯ ಜೊತೆಗೆ ಸಾರ್ವಕಾಲಿಕತೆ ಪತ್ರಕರ್ತರ ಗುಣವಿಶೇಷವಾಗಿರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಲೇಖಕ ತುರುವನೂರು ಮಂಜುನಾಥ್, ಪತ್ರಕರ್ತ ಕನಕಮೂರ್ತಿ, ಕವಯತ್ರಿ ವಿಶಾಲಾರಾಧ್ಯ, ಕನ್ನಡಪರ ಹೋರಾಟಗಾರ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.