ಹುಬ್ಬಳ್ಳಿ: ಪರಿಶಿಷ್ಟ ಜಾತಿಯವರು ಯಾರೊಬ್ಬರೂ ಸಮೀಕ್ಷೆಯಿಂದ ದೂರ ಉಳಿಯಬಾರದು. ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು, ಮಾದಿಗ ಸಮುದಾಯವರು ಜಾತಿ ಕಾಲಂ ನಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಸಬೇಕೆಂದು ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆಗೆ ಬಂದವರ ಬಳಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸದೇ ಕೇವಲ ಮಾದಿಗ ಎಂದು ಬರೆಸಿ ಎಂದು ಒಳಮೀಸಲಾತಿ ಹೋರಾಟ ಸಮಿತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಒಳಮೀಸಲಾತಿ ಜಾರಿಗಾಗಿ 35 ವರ್ಷಗಳಿಂದ ಹೋರಾಟ ನಡೆದಿದೆ. ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿಯಾಗಿದೆ. ಕೆಲವು ಗೊಂದಲಗಳಿಂದಾಗಿ ರಾಜ್ಯದಲ್ಲಿ ಜಾರಿಯಾಗಲು ತೊಂದರೆಯಾಗಿದೆ. ಈಗ ನಡೆದಿರುವ ಸಮೀಕ್ಷೆ ಪೂರ್ಣಗೊಂಡ ನಂತರ ರಾಜ್ಯದಲ್ಲಿಯೂ ಜಾರಿಗೆ ಸಿಎಂ ಸಿದ್ದರಾಮಯ್ಯ ಅವರು ಆಸಕ್ತರಾಗಿದ್ದಾರೆ ಎಂದರು.
ಬೆಂಗಳೂರು ಸೇರಿದಂತೆ ಕೆಲ ಪ್ರದೇಶಗಳಲ್ಲಿ 44 ಲಕ್ಷ ಜನ ಮಾದಿಗ ಹಾಗೂ ಚಲವಾದಿ ಸಮುದಾಯದವರು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವಾಗ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂದು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಅವರನ್ನು ನಿದಿರ್ಷ್ಟವಾಗಿ ಯಾವ ಜನಾಂಗ ಎಂದು ಗುರುತಿಸಲು ಸಾಧ್ಯವಾಗದಿರುವ ಕಾರಣ ಇದೀಗ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆ ವೇಳೆ ಎಲ್ಲರೂ ತಮ್ಮ ಮೂಲ ಜಾತಿಯನ್ನು ಬರೆಸಬೇಕು ಎಂದು ಮನವಿ ಮಾಡಿದರು.
ಮೇ 17ಕ್ಕೆ ಸಮೀಕ್ಷೆ ಪೂರ್ಣಗೊಳ್ಳಬೇಕಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಾದಿಗ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಾಗುತ್ತಿದೆ. ಜಾಗೃತಿ ಇಲ್ಲದ ಕಾರಣ ಬೆಂಗಳೂರಿನಲ್ಲಿಯೇ ಲಾಂತರ ಜನ ಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸಿದ್ದಾರೆ. ಬೆಂಗಳೂರಿನಲ್ಲಿ ಮಾಡಿರುವ ಜಾತಿ ಸಮೀಕ್ಷೆ ತಮಗೆ ತೃಪ್ತಿ ತಂದಿಲ್ಲ ಎಂದರು.
ರಾಜ್ಯದಲ್ಲಿ ಪ್ರಸ್ತುತ ಶೇ. 60ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸಮುದಾಯದ ಜನರು ಸಹಕರಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಮೋಹನ ಹಿರೇಮನಿ, ವೆಂಕಟೇಶ, ಮಾರ್ತಾಂಡಪ್ಪ ಹಾದಿಮನಿ, ಅಶೋಕ ದೊಡ್ಡಮನಿ, ಪ್ರೇಮನಾಥ ಚಿಕ್ಕತುಂಬಳ, ಏಳುಕೋಟೆಪ್ಪ ಪಾಟೀಲ, ಡಿ.ಎಂ. ದೊಡ್ಡಮನಿ ಇತರರು ಇದ್ದರು.