ಜಿಲ್ಲೆ

ಸಾಹಿತಿ ರಾಜಾ ಚೆಂಡೂರ್ ಇನ್ನಿಲ್ಲ

ಪಂಕಜ ಕೆ.ಎಂ.

ಬೆಂಗಳೂರು: ಪ್ರಸಿದ್ಧ ಕಾದಂಬರಿಕಾರ, ಅನುವಾದಕ, ಚಿತ್ರಸಾಹಿತಿ, ನಿರ್ದೇಶಕ ರಾಜಾ ಚೆಂಡೂರ್ (65) ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಮೃತರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಅಭಿಮಾನಿಗಳಿದ್ದಾರೆ. ಹತ್ತು ಸ್ವತಂತ್ರ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿರುವ ರಾಜಾ ಚೆಂಡೂರ್ ಅನುವಾದಕರಾಗಿಯೂ ಪ್ರಸಿದ್ಧರು. ತೆಲುಗು ಭಾಷೆಯ ಪ್ರಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ‘ರಕ್ತ ಸಿಂಧೂರ’ ಕಾದಂಬರಿ ಅನುವಾದದ ಮೂಲಕ ಅನುವಾದಕರಾದ ಅವರು ನಂತರದ ದಿನಗಳಲ್ಲಿ ಯಂಡಮೂರಿ ಅವರ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದರು. ಅಲ್ಲದೇ, ತೆಲುಗಿನ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಸೂರ್ಯದೇವರ ರಾಮಮೋಹನರಾವ್ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯವರಾದ ಅವರು ಬೆಂಗಳೂರಿನ ಆರ್.ಆರ್. ನಗರದ ಪಟ್ಟಣಗೆರೆಯ ನಿವಾಸಿಯಾಗಿದ್ದರು. ಚೆಂಡೂರು ಪ್ರಕಾಶನ, ಭಾಗೀರಥಿ ಪ್ರಕಾಶನ ಹಾಗೂ ನೆಮ್ಮದಿ ಪ್ರಕಾಶನ ಸ್ಥಾಪಿಸಿ ಪುಸ್ತಕ ಪ್ರಕಟಣೆಗಳನ್ನೂ ಮಾಡಿರುವ ಅವರು, ಹಲವಾರು ರೆಡಿಯೋ ನಾಟಕಗಳನ್ನೂ ಬರೆದಿದ್ದಾರೆ. ದೂರದರ್ಶನ ಧಾರಾವಾಹಿಗಳಿಗೆ ಕೆಲಸ ಮಾಡಿದ್ದ ಅವರು, ಸಾಹಿತ್ಯ, ಚಿತ್ರಕಥೆ ಬರೆದು ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.

ಕೆಲ ಸಮಯದಿಂದ ಬಹು ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದರು. ಆರೋಗ್ಯ ಸಮಸ್ಯೆ ತೀವ್ರಗೊಂಡಿದ್ದರಿಂದ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಿಸದೆ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿಧಿವಶರಾದರು. ಮಧ್ಯಾಹ್ನ 3 ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.