ಬೆಂಗಳೂರು: ಹಿರಿಯ ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜಿ.ಎಸ್.ಸಿದ್ದಲಿಂಗಯ್ಯ(94) ಅವರು ರಾತ್ರಿ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ ಇದ್ದು, ಸಾಹಿತಿಗಳು, ಶಿಶ್ಯವರ್ಗ ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಬುಧವಾರ ಸಂಜೆೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ತುಮಕೂರು ಜಿಲ್ಲೆ ಬೆಳ್ಳಾವಿಯವರಾದ ಸಿದ್ದಲಿಂಗಯ್ಯ ಅವರು 1931ರಲ್ಲಿ ಜನಿಸಿದ್ದು, ಕಾಲೇಜು ಶಿಕ್ಷಣದ ವರೆಗೆ ವಿದ್ಯಾಭ್ಯಾಸವನ್ನೆಲ್ಲ ಊರಿನಲ್ಲಿ ಪೂರೈಸಿದರು. ನಂತರ ಬಿಎ (ಆನರ್ಸ್), ಎಂ.ಎ ಕನ್ನಡದಲ್ಲಿ ಪ್ರಥಮ ರ‌್ಯಾಂಕ್‌ನಲ್ಲಿ ಉತ್ತೀರ್ಣರಾದರು.ಮೈಸೂರು ವಿವಿಯಲ್ಲಿ ಎಂಎ (ಕನ್ನಡ) ಸ್ನಾತಕ ಪದವಿಯನ್ನೂ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು, ನಂತರ ದಾವಣಗೆರೆ, ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉಪ ಪ್ರಾಧ್ಯಾಪಕರಾಗಿ, ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ 1989ರಲ್ಲಿ ನಿವೃತ್ತಿ ಹೊಂದಿದರು. ಅದೇ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಆಯ್ಕೆಯಾದರು.
ಸಿದ್ದಲಿಂಗಯ್ಯ ಅವರು ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ರಸಗಂಗೆ, ಉತ್ತರ, ಚಿತ್ರ-ವಿಚಿತ್ರಘಿ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ ಮತ್ತು ಬಿಂದು, ಮುಖಾಮುಖಿ ಹೀಗೆ ಹಲವು ಕವನ ಸಂಕಲನಗಳನ್ನು ಬರೆದಿದ್ದಾರೆ. ಸಾಹಿತಿ ಕವಿ ಹಾಗೂ ವಿಮರ್ಶಕರಾಗಿದ್ದ ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಕುವೆಂಪು ಅವರ ನೆಚ್ಚಿನ ಶಿಷ್ಯರೊಳೊಗೊಬ್ಬರಾಗಿದ್ದ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಾಹಿತಿಗಳು, ಚಿಂತಕರು, ಜನಪ್ರತಿನಿಧಿಗಳು ಸೇರಿ ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ.
ಅಂತಿಮ ದರ್ಶನ:
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹಂಪ ನಾಗರಾಜಯ್ಯ, ಡಾ. ಗೊ.ರು. ಚೆನ್ನಬಸಪ್ಪ, ಡಾ. ಮನು ಬಳಿಗಾರ್, ಬಿ.ಎಸ್. ಪರಮಶಿವಯ್ಯ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರೊ. ಲಕ್ಷ್ಮೀನಾರಾಯಣ, ಡಾ. ಆಶಾದೇವಿ, ಡಾ. ಸಿ.ಯು. ಮಂಜುನಾಥ್, ಕರೀಗೌಡ ಬೀಚನಹಳ್ಳಿ, ಡಾ. ಕಾ.ವೆಂ.ಶ್ರೀನಿವಾಸಮೂರ್ತಿ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಎಂ. ಕೃಷ್ಣಪ್ಪ, ಮಾಜಿ ಶಾಸಕ ವಾಟಾಳ್ ನಾಗರಾಜ್, ಗಾಯಕ ಮುದ್ದುಕೃಷ್ಣ ಸೇರಿದಂತೆ ಹಲವರು ಸಿದ್ದಲಿಂಗಯ್ಯನವರ ಅಂತಿಮ ದರ್ಶನ ಪಡೆದರು.