ಬೆಂಗಳೂರು: ಸಾಹಿತಿ ಡಾ. ಕಮಲಾ ಹಂಪನಾ (89) ಅವರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದು, ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
‘‘ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ, ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಯಿಂದಲೂ ಜನಪ್ರಿಯರಾಗಿದ್ದ ಡಾ. ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ. ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ - ಮುಖ್ಯಮಂತ್ರಿ ಸಿದ್ದರಾಮಯ್ಯ
‘‘ ಸುದೀರ್ಘ 60 ವರ್ಷಗಳ ಕಾಲ ಸಾಹಿತ್ಯ ಸೇವೆ ಸಲ್ಲಿಸಿರುವ ಕಮಲಾ ಹಂಪನಾ ಅವರ ಅಗಲಿಕೆ ಬಹಳ ನೋವು ತಂದಿದೆ. ಈ ಕುಟುಂಬದ ಜತೆ ನನಗೆ 50 ವರ್ಷಗಳ ಒಡನಾಟವಿದೆ. ಇವರ ಪುತ್ರ ಹರ್ಷ ಹಾಗೂ ನಾನು ಬಾಲ್ಯದಲ್ಲಿ ಒಟ್ಟಿಗೆ ಓದಿದವರು. ಬಹಳ ಧೈರ್ಯದಿಂದ ಮಾತನಾಡುತ್ತಿದ್ದ ಅವರ ಸಾಹಿತ್ಯ ಸೇವೆ ದಾಖಲೆಗಳಲ್ಲಿ ಉಳಿದುಕೊಂಡಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸರ್ಕಾರದ ವತಿಯಿಂದ ಅವರಿಗೆ ಸಲ್ಲಿಸಬಹುದಾದ ಗೌರವವನ್ನು ಸಲ್ಲಿಸುತ್ತೇವೆ.’ - ಡಿಸಿಎಂ ಡಿ.ಕೆ. ಶಿವಕುಮಾರ್
‘‘ ಡಾ. ಕಮಲಾ ಹಂಪನಾ ಅವರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ, ಕಥೆ ,ಕಾದಂಬರಿ,ವಿಮರ್ಶೆ, ವೈಚಾರಿಕ ಸಾಹಿತ್ಯ ,ಶಿಶು ಸಾಹಿತ್ಯ ,ಅನುವಾದ ಹಾಗೂ ಸಂಶೋಧನೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಮೂಲ್ಯವಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಇಡೀ ಕುಟುಂಬ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅನನ್ಯ ಕೊಡುಗೆ ನೀಡುತ್ತಿದೆ. ಅವರ ಅಗಲಿಕೆ ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ಕರುಣಿಸಲು’ - ಸಚಿವ ಶಿವರಾಜ ತಂಗಡಗಿ
‘‘ಕಮಲ ಹಂಪನಾ ಅವರು ಲೇಖಕಿ ಮಾತ್ರವಲ್ಲ, ಒಬ್ಬ ಹೋರಾಟಗಾರ್ತಿಯಾಗಿದ್ದರು. ಲೇಖಕಿಯಾಗಿ ಅವರದು ಅಪೂರ್ವ ಕೃಷಿ. ಸಂಶೋಧನೆ, ವೈಚಾರಿಕ ಬರಹ ಮತ್ತು ಸೃಜನಶೀಲ ಸಾಹಿತ್ಯ ಸೃಷ್ಟಿಯನ್ನು ಒಟ್ಟಿಗೇ ನಿರ್ವಹಿಸಿದ್ದಾರೆ. ಅಪರೂಪದ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಆಧುನಿಕ ವಚನಗಳನ್ನು ರಚಿಸಿ ಹೊಸ ಪ್ರಯೋಗ ಮಾಡಿದ್ದಾರೆ. ಮಹಿಳಾ ಪರ ಕಾಳಜಿಯ ಹೋರಾಟಗಳಿಗೂ ಬೆಂಬಲಿಸಿದ್ದಾರೆ. ತಳಸಮುದಾಯಗಳ ದನಿಯಗಿದ್ದಾರೆ. ನನ್ನ ಬಗ್ಗೆ ಅಪಾರ ಆದರ ತೋರುತ್ತಿದ್ದ ಅವರ ನಿಧನ ನೋವು ತಂದಿದೆ. ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ’. - ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ
‘‘ಕರ್ನಾಟಕದ ಅಗ್ರಹಣ್ಯ ಮಹಿಳಾ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಸಂತಾಪ ಕೋರುತ್ತೇನೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಬಲು ಅಪರೂಪದ ಜೋಡಿ ಹಂಪನಾ ದಂಪತಿ ಅವರ ಕೊಡುಗೆ ಅನುಪಮವಾದುದು. ನಾಡು ನುಡಿಯ ಬಗೆಗಿನ ಪ್ರೀತಿ, ನಿರಂತರ ಪರಿಶ್ರಮ ಅವರ ಸಾಹಿತ್ಯಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. - ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ
‘‘ ಕಮಲಾ ಹಂಪನಾ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ತಮ್ಮ ಲೇಖನಗಳು, ಸಂಶೋಧನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾವು ಮೂಡಿಸಿದ್ದ ಅವರು, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಅಗಲಿಗೆಯ ದುಃಖ ಭರಿಸುವ ಶಕ್ತಿಯನ್ನು ಕುಟಂಬ ಹಾಗೂ ಅಭಿಮಾನಿಗಳಿಗೆ ಭಗವಂತ ಕುರಣಿಸಲಿ;’ - ಸಂಸದ ಬಸವರಾಜ ಬೊಮ್ಮಾಯಿ
‘‘ ಕನ್ನಡದ ಶ್ರೇಷ್ಠ ಸಾಹಿತಿ ನಾಡೋಜ ಕಮಲಾ ಹಂಪನಾ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಆದ ಬಹು ದೊಡ್ಡ ನಷ್ಟ. ಶ್ರೇಷ್ಠ ಸಂಶೋಧಕರಾಗಿ ಆರು ದಶಕಗಳಿಂದ ಕನ್ನಡ ನಾಡು-ನುಡಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದರು. ನಾಟಕ, ಕತೆಗಳಲ್ಲದೆ, ಅನೇಕ ಆಧುನಿಕ ವಚನಗಳನ್ನು ರಚಿಸಿದ್ದಾರೆ. ಅವರ ಅಗಲಿಕೆಯಿಂದ ಒಬ್ಬ ಹಿರಿಯ ಅಕ್ಕನನ್ನು ಕಳೆದುಕೊಂಡಂತಾಗಿದೆ’ -ಡಾ.ಸಿ.ಸೋಮಶೇಖರ, ಅಭಾಶಸಾಪ ಅಧ್ಯಕ್ಷರು