ದೊಡ್ಡಬಳ್ಳಾಪುರದ ಡಾ.ರಾಜ್​ಕುಮಾರ್​ ಕಲಾಮಂದಿರದಲ್ಲಿ ಮಾದರ ಮಹಾಸಭಾದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಜಾಗೃತಿ ಸಭೆ ನಡೆಯಿತು. ಸಮುದಾಯದ ಪಾಲನಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಸಿದ್ದರಾಜುಸ್ವಾಮಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್​.ಹನುಮಂತಯ್ಯ, ಚಂದ್ರಪ್ಪ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ರಾಜಘಟ್ಟ ಕಾಂತರಾಜ್​, ತಳವಾರ ನಾಗರಾಜ್​,ನಾರಾಯಣಪ್ಪ, ಮುನಿಯಪ್ಪ ಇದ್ದರು. 
ಜಿಲ್ಲೆ

ಸಮೀಕ್ಷೆಯಲ್ಲಿ ಮಾದಿಗ ಎಂದೇ ಬರೆಸಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸಮುದಾಯದ ಬಂಧುಗಳು ಎಕೆ, ಎಡಿ, ಎಎ ಎಂದು ಬರೆಸಬೇಡಿ. ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮಾದಿಗ ಎಂದೇ ಬರೆಸಿ ಎಂದು ಮಾಜಿ ಸಚಿವ ಎಚ್​.ಆಂಜನೇಯ ತಿಳಿಸಿದರು. ನಗರದ ಡಾ.ರಾಜ್​ಕುಮಾರ್​ ಕಲಾಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕು ದಶಕಗಳ ಹೋರಾಟ, ತ್ಯಾಗ, ಬಲಿದಾನಗಳ ಫಲಶೃತಿಯಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತಂದಿದೆ. ಒಳಮೀಸಲಾತಿ ಪ್ರಯೋಜನವನ್ನು ಸಮುದಾಯ ಪಡೆದುಕೊಳ್ಳಬೇಕು ಎಂದು ಹೇಳಿದರು. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಆರ್​.ವಿ.ಮಹೇಶ್​ ಕುಮಾರ್​, ಮುಖಂಡರಾದ ರಾಮಕೃಷ್ಣಪ್ಪ, ಬಚ್ಚಹಳ್ಳಿ ನಾಗರಾಜ್​, ಇದ್ದರು.

ಚಿಂತನ ಮಂಥನ ಆಗಲಿ : ಒಳಮೀಸಲಾತಿ ಹೋರಾಟದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನೇತಾರರು ಪಕ್ಷಾತಿತವಾಗಿ ಒಗ್ಗೂಡಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಸ್ಥಾಪಿಸಿದ್ದೇವೆ. ಸಮುದಾಯವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮಾದಿಗರು ಇದ್ದಾರೆ. ಮಾದಿಗರ ಕುರಿತು ಚಿಂತನ ಮಂಥನವಾಗಬೇಕು. ಮೂಲ ಜಾತಿ ಮಾದಿಗ ಎಂದು ಬರೆಸಿದರೆ ಮಾತ್ರ ಮೀಸಲಾತಿ, ಇಲ್ಲದಿದ್ದಲ್ಲಿ ಯಾವ ಮೀಸಲಾತಿಯೂ ಬರುವುದಿಲ್ಲ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಸಿದರು.