ಜಿಲ್ಲೆ

ಭಾವಸಾರ ಕ್ಷತ್ರಿಯ ಎಂದೇ ಬರೆಸಿ

ರೇಷ್ಮೆ ನಗರ ಡೆಸ್ಕ್

 ರಾಮನಗರ: ರಾಜ್ಯದ ಪ್ರತಿ ಜಿಲ್ಲೆಗಳಿಗೆ ತೆರಳಿ ಸಮುದಾಯದವರಿಗೆ ಜಾತಿ ಸಮೀೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀನಿವಾಸ್​ ರಾವ್​ ಪಿಸ್ಸೆ ತಿಳಿಸಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಮನಗರ ಜಿಲ್ಲಾ ಭಾವಸಾರ ಕ್ಷತ್ರಿಯ ಸಮಾಜದ ಸಭೆ ಉದ್ಘಾಟಿಸಿ ಮಾತನಾಡಿ, ಜಾತಿ ಸಮೀೆಗೆ ಆಗಮಿಸಿದ ವೇಳೆ ಜಾತಿ ಕಾಲಂನಲ್ಲಿ ಭಾವಸಾರ ಕ್ಷತ್ರಿಯ ಎಂಬುದಾಗಿ ಹಾಗೂ ಭಾಷೆ ಕಾಲಂನಲ್ಲಿ ಮರಾಠಿ ಎಂದೂ, ವೃತ್ತಿ ಕಾಲಂನಲ್ಲಿ ದರ್ಜಿ ಎಂದು ನಮೂದಿಸಬೇಕೆಂದು ತಿಳಿಸಿದರು.

ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಮುಖ್ಯಸ್ಥ ರಮೇಶ್​ ಕುಮಾರ್​ ತಾಪ್ಸೆ ಮಾತನಾಡಿ, ಕ್ಷತ್ರಿಯ ಸಮುದಾಯವರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ವಾರ್ಷಿಕವಾಗಿ ರಾಜ್ಯದಲ್ಲಿ ನಮ್ಮ ಸಮುದಾಯವೂ 500 ಕೋಟಿ ರೂ. ತೆರಿಗೆಯನ್ನು ರಾಜ್ಯ ಸರ್ಕಾರಕ್ಕೆ ಕಟ್ಟುತ್ತಿದೆ. ಆದರೂ, ಸವಲತ್ತು ವಿತರಣೆಯಲ್ಲಿ ಸರ್ಕಾರ ಸಮುದಾಯಕ್ಕೆ ನೀಡುತ್ತಿಲ್ಲ ಎಂದರು.

ರಾಮನಗರ ಸಮಾಜದ ಉಪಾಧ್ಯಕ್ಷ ಕಿರಣ್​ರಾವ್​ ಮಾತನಾಡಿ, ಈ ಹಿಂದೆ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ರಾಮನಗರ ಭಾವಸಾರ ಕ್ಷತ್ರಿಯ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡುವ ಸಂಬಂಧ 36 ಲಕ್ಷ ರೂ. ನೀಡಿತ್ತು. ಆದರೆ, ಕೆಲವು ದೋಷಗಳಿಂದಾಗಿ ಆ ಹಣ ಹಾಗೆಯೇ ಉಳಿದುಕೊಂಡಿದೆ. ಜಿಲ್ಲೆಯಲ್ಲಿ ಭಾವಸಾರ ಸಹಕಾರ ಬ್ಯಾಂಕ್​ ಸ್ಥಾಪನೆ ಮಾಡಬೇಕು. ಇದರಿಂದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ರಾಜೇಂದ್ರ, ಜಿಲ್ಲಾ ಮುಖಂಡ ಗಣೇಶ್​ರಾವ್​ ಕಾಕಡೆ, ನಾಗರಾಜ್​ರಾವ್​ ಬಾಂಬೋರೆ, ಮಂಜುನಾಥ್​ರಾವ್​ ಬಾಂಬೋರೆ, ಮಧುಸೂಧನ್​ ಬಾಂಬೋರೆ, ಉಮೇಶ್​ ಜಿಂಗಾಡೆ, ಶ್ರೀನಿವಾಸ್​ರಾವ್​, ನಂಜುಂಡರಾವ್​, ರವೀಶ್​ರಾವ್​ ಇದ್ದರು.