ಮೈಸೂರು: ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜಯಂತಿ ಅಂಗವಾಗಿ ಜಯಚಾಮರಾಜ ಒಡೆಯರ್ ಗರಡಿ ಸಂಘದಿಂದ ಫೆ.25ರಂದು ನಾಡಕುಸ್ತಿ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಹದೇವ ತಿಳಿಸಿದರು.
ನಗರದ ದೊಡ್ಡಕೆರೆ ಮೈದಾನದಲಿರುವ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪಂದ್ಯಾವಳಿ ಉದ್ಘಾಟಿಸುವರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್‌ನ ಟ್ರಸ್ಟಿ ಎಂ.ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸುವರು. ಮಹಿಳೆಯರ ಆರು ಜೋಡಿಗಳು ಸೇರಿದಂತೆ ಒಟ್ಟು 57 ಜೋಡಿಗಳು ಕುಸ್ತಿಯಲ್ಲಿ ಭಾಗವಹಿಸಲಿವೆ. ಅಂದು ಸಂಜೆ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು. ಸಂಘದ ಅಧ್ಯಕ್ಷ ಸಿ.ಬಸವರಾಜು, ಮಹಾಲಿಂಗೇಶ್ವರ ದೇವಾಲಯ ಕಾರ್ಯದರ್ಶಿ ಜಿ.ಎನ್.ಅನಂತವರ್ಧನ ಇದ್ದರು.