ಮುಧೋಳ ನಗರದಲ್ಲಿ ಹಮಾಲಿ ಕೆಲಸ ಮಾಡುತ್ತಿರುವ ಅಪ್ಪಾಸಿ ತೇರದಾಳ. 
ಜಿಲ್ಲೆ

ಕುಸ್ತಿಪಟುವಿಗೆ ಬೇಕಿದೆ ಆರ್ಥಿಕ ಬೆಂಬಲ…!

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಆತ ಕುಸ್ತಿ ಹಾಗೂ ಸೈಕ್ಲಿಂಗ್ ಕ್ರೀಡಾಪಟು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡು ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಸರ್ಕಾರದ ಸೂಕ್ತ ಸಹಾಯ ದೊರೆಯದೆ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ.

ಇದು ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಅಪ್ಪಾಸಿ ತೇರದಾಳ ಅವರ ವ್ಯಥೆಯ ಕಥೆ. ಅವರಿಗೀಗ 30 ವರ್ಷ. ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹೆಸರಾಂತ ಜಗಜಟ್ಟಿಗಳನ್ನು ಮಣ್ಣುಮುಕ್ಕಿಸಿದ ಕೀರ್ತಿ ಇವರದ್ದು.

2021ರಲ್ಲಿ ಆಯೋಜಿಸಿದ್ದ 5ನೇ ರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಬಂಗಾರದ ಪದಕ ಪಡೆದಿರುವುದು.

ಪ್ರಶಸ್ತಿಗಳ ಮಹಾಪೂರ

ಅಪ್ಪಾಸಿ ತೇರದಾಳ ಕುಸ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ಪಡೆದಿದ್ದಾರೆ. ಕರ್ನಾಟಕ ಕಿಶೋರ, ಮಹಾಪೂರ ಕಿಶೋರ, ಆರು ಬಾರಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ, ನಾಲ್ಕು ಬಾರಿ ಮೈಸೂರು ದಸರಾ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ ಹಾಗೂ ಹರಿಯಾಣ, ಪಂಜಾಬ್, ಉತ್ತರಪ್ರದೇಶ, ದೆಹಲಿ, ಮಹಾರಾಷ್ಟ್ರ, ಮಣಿಪುರ, ಮೂರು ಬಾರಿ ಗೋವಾ, ಒಡಿಶಾ, ಬೆರಂಪುರ, ಆಗ್ರಾ, ಮೀರತ್ ವಿವಿಧ ರಾಜ್ಯಗಳಲ್ಲಿ ಆಯೋಜಿಸಿದ್ದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಜಯ ಗಳಿಸಿ ಚಿನ್ನ, ಬೆಳ್ಳಿ, ಕಂಚು, ಗದೆ, ಡಾಲ್‌ಗಳನ್ನು ಗೆದ್ದಿದ್ದಾರೆ. ಅಲ್ಲದೇ ಒಡಿಶಾ, ಜಾರ್ಖಂಡ, ಛತ್ತೀಸ್‌ಗಢ್, ಪುಣೆ, ವಿವಿಧ ರಾಜ್ಯಗಳಲ್ಲಿ ಕುಸ್ತಿ ಮತ್ತು ಸೈಕ್ಲಿಂಗ್ ತಂಡಕ್ಕೆ ತರಬೇತುದಾರರಾಗಿಯೂ ಕಾರ್ಯಮಾಡಿದ ಅಪಾರ ಅನುಭವ ಇವರಲ್ಲಿದೆ. ಆದರೆ ತಾವು ಗೆದ್ದ ಪ್ರಶಸ್ತಿ ಪತ್ರ, ಪದಕ, ಟ್ರೋಫಿಗಳನ್ನು ಇಟ್ಟುಕೊಳ್ಳಲು ಜಾಗ ಇಲ್ಲದ್ದಕ್ಕೆ ಸ್ನೇಹಿತರ ಮನೆಯಲ್ಲಿಡುವ ಸ್ಥಿತಿ ಬಂದಿರುವುದು ಶೋಚನೀಯ.

ಹಿರಿಯರ ವಿಭಾಗದ ಕುಸ್ತಿಗೆ ಆಯ್ಕೆ

ಅಪ್ಪಾಸಿ ಅವರ ಸಾಧನೆಯನ್ನು ಗುರುತಿಸಿ ‘ಖೇಲೋ ಇಂಡಿಯಾ’ದಲ್ಲಿ ದಾಖಲಾಗಿರುವ ಖಾಸಗಿ ಕುಸ್ತಿ ಫೆಡರೇಷನ್‌ನಿಂದ ಸೆ. 14 ರಿಂದ 21ರವರೆಗೆ ಲಂಡನ್‌ನಲ್ಲಿ ನಡೆಯುವ ಓಪನ್ ಇಂಟರ್‌ನ್ಯಾಷನಲ್ ಸ್ಪೋಟ್ಸ್ ಚಾಂಪಿಯನ್‌ಶಿಷ್-2023 ಪಂದ್ಯಾವಳಿಗೆ ಹಾಗೂ ಅ. 6ರಂದು ಮಲೇಶಿಯಾದಲ್ಲಿ ಆಯೋಜಿಸಿರುವ ಪಂದ್ಯಾವಳಿಗೆ ಹಿರಿಯರ 55 ಕೆಜಿ ವಿಭಾಗದಲ್ಲಿ ಭಾಗವಹಿಸುವಂತೆ ಅಪ್ಪಾಸಿ ಅವರಿಗೆ ಆಹ್ವಾನ ಬಂದಿದೆ. ಆದರೆ ಅದಕ್ಕೆ ಆರ್ಥಿಕ ಅಡಚಣೆ ಅಡ್ಡಿಯಾಗಿದೆ. ಕನಿಷ್ಠ ಅಲ್ಲಿಗೆ ತೆರಳಲು 3.5 ಲಕ್ಷ ರೂ.ಗಳ ಅವಶ್ಯಕತೆ ಇವರಿಗೆ ಇದೆಯಂತೆ. ಅಷ್ಟು ಹಣ ಹೊಂದಿಸುವುದು ಕಷ್ಟಸಾಧ್ಯ. ಹೀಗಾಗಿ ಸಹಾಯ ಮಾಡಲು ಯಾರಾದರೂ ಪ್ರಾಯೋಜಕರು, ಜಿಲ್ಲಾಡಳಿತ, ದಾನಿಗಳು ಸಹಾಯ ಮಾಡಲಿ ಎಂಬುದು ಅಪ್ಪಾಸಿ ಬಯಕೆ.

ಅಪ್ಪಾಸಿ ಮನೆ ಕುಸ್ತಿ ಪಟುಗಳ ತವರು ಮನೆ

ಅಪ್ಪಾಸಿ ಅವರ ವಾಸಸ್ಥಳ ಕುಂಬಾರಹಳ್ಳ ಕುಸ್ತಿ ಹಾಗೂ ಸೈಕ್ಲಿಂಗ್‌ಗೆ ಖ್ಯಾತಿ ಪಡೆದಿದೆ. ಇವರ ತಂದೆ ಭೀಮಪ್ಪ ಸತ್ಯಪ್ಪ ತೇರದಾಳ ರೈತರಾಗಿದ್ದರು. ಇವರಿಗೆ ಏಳು ಜನ ಮಕ್ಕಳು ಎಲ್ಲರೂ ಕ್ರೀಡಾಪಟುಗಳೇ. ಇರುವ ಪುಟ್ಟ ಜಮೀನಿನಲ್ಲೇ ಒಪ್ಪವಾದ ಸಂಸಾರ ಸಾಗುತ್ತಿತ್ತು. ಆಗ ವಿವಿಧ ಭಾಗಗಳಿಂದ ಬರುತ್ತಿದ್ದ ಕುಸ್ತಿಪಟುಗಳು ಇವರ ಮನೆಗೆ ಬಂದು ಊಟೋಪಚಾರ ಮಾಡುತ್ತಿದ್ದರು. ಇವರ ಮನೆ ಕುಸ್ತಿಪಟುಗಳ ಪಾಲಿಗೆ ತವರುಮನೆಯಂತಿತ್ತು. ಆದರೆ ತಂದೆ-ತಾಯಿ ನಿಧನರಾದ ನಂತರ ಪರಿಸ್ಥಿತಿ ಬದಲಾಗಿ ಎಲ್ಲರೂ ಕಷ್ಟಕರವಾಯಿತು. ಅಪ್ಪಾಸಿ ಕುಟುಂಬ ಬೀದಿ ಪಾಲಾಗಿ, ಒಪ್ಪೊತ್ತಿಗೂ ಪರದಾಡುವ ಸ್ಥಿತಿಗೆ ಬಂದಿದ್ದು ವಿಪರ್ಯಾಸ.

ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ

ಅಪ್ಪಾಸಿ ಬದುಕು ಕಷ್ಟಕರವಾಗಿದ್ದರೂ ಸ್ವಾಭಿಮಾನಿ ಬದುಕು ಸಾಗಿಸುತ್ತಿದ್ದಾರೆ. ನಿತ್ಯ ಜೀವನಕ್ಕೆ ಮುಧೋಳದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಹಮಾಲಿ ಮಾಡುತ್ತಾ, ರನ್ನಬೆಳಗಲಿ ಗ್ರಾಮದಲ್ಲಿ ಕಲ್ಲು ಒಡೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಜೊತೆಗೆ ಕಳೆದ 15 ವರ್ಷಗಳಿಂದ ತಮ್ಮ ಸ್ವಗ್ರಾಮ ಸೇರಿ ವಿವಿಧೆಡೆಯಿಂದ ಕುಸ್ತಿ ಕಲಿಸುವಂತೆ ಯಾರೇ ಕೇಳಿಕೊಂಡು ಬಂದರೂ ಅವರಿಗೆ ನೆಚ್ಚಿನ ಗುರುವಾಗಿ ಕಲಿತ ವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. ಇವರ ಹಲವು ಶಿಷ್ಯರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರಾದರೂ, ಇವರಿಗೆ ಆ ಯೋಗ ಬಂದೇ ಇಲ್ಲ. ಚಿತ್ರ ನಟರಾದ ದುನಿಯಾ ವಿಜಯ, ಚಂದನ ದೇವ, ಅರ್ಜುನ ಆರ್ಯನ್ ಅವರಿಗೆ ಹಲವು ತಿಂಗಳು ಕುಸ್ತಿ ತರಬೇತಿ ನೀಡಿರುವುದು ಇವರ ವಿಶೇಷ.

ಸಹಾಯಕ್ಕಾಗಿ ಆಗ್ರಹ

ಕುಸ್ತಿ ಪಟು ಅಪ್ಪಾಸಿ ತೇರದಾಳ ಅವರ ಶೋಚನೀಯ ಸ್ಥಿತಿಯಲ್ಲಿದ್ದು, ಅವರು ಹಿರಿಯರ ವಿಭಾಗದಲ್ಲಿ ಕುಸ್ತಿಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಹಾಯಮಾಡುವಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದಾರೆ. ಇದರ ಜೊತೆಗೆ ಕ್ರೀಡಾಪಟುವಿನ ಸಂಕಷ್ಟಕ್ಕೆ ಸಹಾಯ ಮಾಡುವ ಕ್ರೀಡಾಪ್ರೇಮಿಗಳು ನೇರವಾಗಿ ಇಂಡಿಯನ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ : 616611058, ಐಎಫ್‌ಎಸ್‌ಸಿ ಕೋಡ್ : ಐಈಐಆ0000017 ಖಾತೆಗೆ ಹಣ ಸಂದಾಯ ಮಾಡಬಹುದು. ಅಪ್ಪಾಸಿ ತೇರದಾಳ ಅವರನ್ನು ನೇರವಾಗಿ ಸಂಪರ್ಕಿಸಲು ಮೊ.ಸಂ. 9606240377 ಸಂಪರ್ಕಿಸಲು ಕೋರಿದೆ.

ನಾನು ವಿವಿಧ ರಾಜ್ಯಗಳಲ್ಲಿ ನಡೆದ ಕುಸ್ತಿಯಲ್ಲಿ ಭಾಗವಹಿಸಿ ನೂರಾರು ಪದಕ, ಪ್ರಶಸ್ತಿಗಳನ್ನು ಪಡೆದಿರುವೆ. ವಿದೇಶದಲ್ಲೂ ವಿಜಯ ಪತಾಕೆ ಹಾರಿಸಬೇಕೆಂಬ ಬಹಳ ವರ್ಷಗಳ ಗುರಿ ಇದೆ. ಈಗ ಅವಕಾಶ ದೊರಕಿದೆ. ಆದರೆ ಹಣದ ಅವಶ್ಯಕತೆ ಕಾಡುತ್ತಿದೆ. ಅಲ್ಲದೇ ಸರ್ಕಾರದವರು ಜಾಗ ನೀಡಿದರೆ ಕ್ರೀಡಾ ಅಕಾಡೆಮಿ ತೆರೆದು ಯುವಕರಿಗೆ ಕುಸ್ತಿ ಮತ್ತು ಸೈಕ್ಲಿಂಗ್ ತರಬೇತಿ ನೀಡಬೇಕೆಂಬ ಉದ್ದೇಶವೂ ಇದೆ.
ಅಪ್ಪಾಸಿ ತೇರದಾಳ, ಸಂಕಷ್ಟದಲ್ಲಿರುವ ಕುಸ್ತಿಪಟು 
ರಾಷ್ಟ್ರಮಟ್ಟದ ಕುಸ್ತಿ ಕ್ರೀಡಾಪಟು ಕೂಲಿ ಮಾಡಿಕೊಂಡು ಜೀವನ ನಿರ್ವಹಿಸಬೇಕು ಎಂದರೆ ಪರಿಸ್ಥಿತಿ ಎಷ್ಟು ಕೆಟ್ಟಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಪ್ರತಿಭೆ ಇದ್ದರೂ ಅದನ್ನು ಪ್ರದರ್ಶಿಸಲು ಆರ್ಥಿಕ ಸಹಾಯ ಬೇಕು. ಸರ್ಕಾರ, ಜಿಲ್ಲಾಡಳಿತ, ಕ್ರೀಡಾಪ್ರೇಮಿಗಳು ಇತ್ತ ಗಮನಹರಿಸಿದರೆ, ಇಂಥ ಕ್ರೀಡಾಪಟುಗಳ ಬದುಕು ಸಾರ್ಥಕವಾಗಿ ಬೆಳಗುತ್ತದೆ.
ಮಹಾದೇವ ಹೆಗಡೆ, ಕುಂಬಾರಹಳ್ಳ, ಜಮಖಂಡಿ