ಕಮಲನಗರ: ಶಾಸಕ ಪ್ರಭು ಚವ್ಹಾಣ ಅವರು ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ ಹರಿನಾಥ ಮಹಾರಾಜರ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡರು.
ಸದ್ಗುರು ಹರಿನಾಥ ಮಹಾರಾಜರ ಸಮಾಧಿಗೆ ಪೂಜೆ ನೆರವೇರಿಸಿ ರೈತರ ಏಳಿಗೆ ಮತ್ತು ಔರಾದ(ಬಿ) ಕ್ಷೇತ್ರದ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಭಜನಾ ಕಲಾವಿದರ ಜೊತೆಗೆ ಭಕ್ತಿ ಭಾವದಿಂದ ಹೆಜ್ಜೆ ಹಾಕಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಾಂತಿ ಮತ್ತು ಸೌಹಾರ್ದತೆಯ ಪ್ರತಿಪಾದಕರಾಗಿದ್ದ ಹರಿನಾಥ ಮಹಾರಾಜರ ಮಹಿಮೆಗಳು ಅಪಾರ. ಕಷ್ಟವೆಂದು ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳು ತೀರುತ್ತವೆ. ಪೂಜ್ಯರ ಸಮಾಧಿಗೆ ನಮಿಸಿದರೆ ಒಳ್ಳೆಯದಾಗುತ್ತದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ ಎಂದರು.
ನಾನು ಸದ್ಗುರು ಹರಿನಾಥ ಮಹಾರಾಜರ ಭಕ್ತನಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಬಂದು ಮಹಾರಾಜರ ಸನ್ನಿಧಿಗೆ ನಮಿಸುತ್ತೇನೆ. ಮೊದಲ ಚುನಾವಣೆಗೂ ಮುನ್ನ ಇಲ್ಲಿಗೆ ಭೇಟಿ ನೀಡಿದ್ದೆ. ಸದ್ಗುರು ಹರಿನಾಥ ಮಹಾರಾಜರ ಕೃಪೆ ಮತ್ತು ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದ ಸಚಿವನಾಗಿ, ಶಾಸಕನಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ. ಇಲ್ಲಿನ ಜನರು ಸಾಕಷ್ಟು ಪ್ರೀತಿ ನೀಡಿದ್ದಾರೆ. ಅದರಂತೆ ಹೊಳಸಮುದ್ರವನ್ನು ಸ್ವಂತ ಗ್ರಾಮವೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ ಎಂದರು.
ಗ್ರಾಮದ ಮುಖಂಡರಾದ ಅನಂತ ಕದಮ್ ಮಾತನಾಡಿ, ಸದ್ಗುರು ಹರಿನಾಥ ಮಹಾರಾಜರ ಪರಮ ಭಕ್ತರಾಗಿರುವ ಶಾಸಕರು ದೇವಸ್ಥಾನ ಮತ್ತು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಮಂದಿರದಲ್ಲಿ ಶೆಡ್ ಹಾಗೂ ಮತ್ತಿತರೆ ಕೆಲಸಗಳನ್ನು ಮಾಡಿದ್ದಾರೆ.
ಗ್ರಾಮದಲ್ಲಿ ಶಾಲೆ, ಆಸ್ಪತ್ರೆ, ಪಶು ಆಸ್ಪತ್ರೆ, ರಸ್ತೆ, ಬ್ಯಾರೇಜ್‌ಗಳ ನಿರ್ಮಾಣ, ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ಸೇರಿದಂತೆ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಹೊಳಸಮುದ್ರ- ಕೊಟಗ್ಯಾಳ ಮತ್ತು ಹೊಳಸಮುದ್ರ-ಅಶೋಕನಗರ ರಸ್ತೆಗಳನ್ನು ನಿರ್ಮಿಸುವುದು ಅತ್ಯಂತ ಅವಶ್ಯಕತೆಯಿದೆ ಎಂದು ಶಾಸಕರ ಗಮನಕ್ಕೆ ತಂದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ಸದ್ಗುರು ಹರಿನಾಥ ಮಹಾರಾಜರ ಮಂದಿರ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿದ್ದು, ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಕಿರಣ ಪಾಟೀಲ, ಬಾಬುರಾವ ತೋರ್ಣಾವಾಡಿ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಸಂತೋಷ ಸೋಲಾಪೂರೆ, ಪ್ರವೀಣ ಕಾರಬಾರಿ, ಉದಯ ಸೋಲಾಪೂರೆ, ಬಂಟಿ ರಾಂಪೂರೆ, ಪವನ ನಿಡೋದಾ, ಭರತ ಕದಂ, ಅಶೋಕ ಮೇತ್ರೆ, ರಾಹುಲ ಪಾಟೀಲ, ವಿಷ್ಣು ರುದ್ನೂರೆ, ಮಾರುತಿ ಅಳಂದೆ, ಅನೀಲ ಶಿಂಧೆ, ಜ್ಞಾನೇಶ್ವರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.