ಜಿಲ್ಲೆ

ಕ್ರೀಡಾಂಗಣಕ್ಕೆ ರೇಷ್ಮೆ ಇಲಾಖೆ ಜಾಗ ಬಳಕೆಗೆ ವಿರೋಧ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿನ ನೌಬಾದ್ ಬಳಿಯ ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತೀರ್ಮಾನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ವಿರೋಧ ವ್ಯಕ್ತಪಡಿಸಿದ್ದು, ಕ್ರೀಡಾಂಗಣಕ್ಕಾಗಿ ಬೇರೆ ಜಾಗ ಪರುಶೀಲಿಸುವಂತೆ ತಿಳಿಸಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅರಳಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ರಾಜ್ಯೋತ್ಸವದಲ್ಲಿ ಘೋಷಣೆ ಮಾಡಿದ್ದು ಸಂತಸ. ಆದರೆ ರೇಷ್ಮೆ ಇಲಾಖೆಯ ಜಾಗ ಸಮಂಜಸವಲ್ಲ. ರೇಷ್ಮೆ ಇಲಾಖೆಯನ್ನು ಅಭಿವೃದ್ಧಿ ಗೊಳಿಸುವುದು ಬಿಟ್ಟು, ಅದನ್ನು ಮೊಟಕುಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರೇಷ್ಮೆ ವಾಣಿಜ್ಯ ಬೆಳೆ. ಅದರತ್ತ ರೈತರು ಮುಖ ಮಾಡಿದ್ದಾರೆ. ಇದೀಗ ರೇಷ್ಮೆ ಇಲಾಖೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಘೋಷಣೆ ಮಾಡಿದ್ದು ರೈತರಿಗೆ ಅನ್ಯಾಯವಾದಂತೆ. ಈ ಹಿಂದೆ ರೇಷ್ಮೆ ಇಲಾಖೆಯ ಒಟ್ಟು ಭೂಮಿ 82.1 ಎಕರೆಯಲ್ಲಿ 49 ಎಕರೆ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಹಿಂದಿನ ಸರ್ಕಾರದಲ್ಲಿ ನೀಡಲಾಗಿತ್ತು. ಕ್ರಿಡಾಂಗಣ ನಿರ್ಮಾಣ ಮಾಡಲು ಗುರುತಿಸಿದ ರೇಷ್ಮೆ ಇಲಾಖೆ ಜಾಗದ ಬದಲು ಅನ್ಯ ಸ್ಥಳ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಕೆಸಿಎ ಜೊತೆಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೆಲವರ ಹಸ್ತಕ್ಷೇಪದಿಂದ ಅದು ನನೆಗುದಿಗೆ ಬಿದ್ದಿದೆ. ಈ ಕಡತವನ್ನು ಪರಿಶೀಲಿಸಿ ಭಾಲ್ಕಿ ರಸ್ತೆಯ ಕಪಲಾಪುರ ಗ್ರಾಮದ ಸಮೀಪದಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಉತ್ತಮ. ಈ ಕುರಿತು ಸಚಿವ ಖಂಡ್ರೆ ಅವರಿಗೆ ಸೂಚನೆ ಕೊಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.