ಜಿಲ್ಲೆ

ಬೀದರ್ ವಾಣಿಜ್ಯ ಸಂಸ್ಥೆಗೆ ನಿಯಮ ಬಾಹಿರ ಚುನಾವಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ನಿಯಮ ಬಾಹಿರವಾಗಿ ಚುನಾವಣೆ ನಡೆಸಲಾಗಿದೆ ಎಂದು ಸಂಸ್ಥೆಯ ಅಜೀವ ಸದಸ್ಯರೂ ಆದ 2022 ರಿಂದ 2025 ರ ಅವಧಿಯ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಧನ್ನೂರು ಆರೋಪಿಸಿದ್ದಾರೆ.

ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೆ ಈ ಕುರಿತು ಅವರು ಶುಕ್ರವಾರ ದೂರು ಸಲ್ಲಿಸಿದ್ದಾರೆ.

ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ನಡೆಸದೆ, ಅಕ್ಟೋಬರ್ 21 ರಂದು 2025 ರಿಂದ 2030 ರ ಅವಧಿಯ ಹೊಸ ಆಡಳಿತ ಮಂಡಳಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಆಪಾದಿಸಿದ್ದಾರೆ.

ಚುನಾವಣೆ ಕುರಿತು ಸದಸ್ಯರಿಗೆ ಸೂಚನಾ ಪತ್ರ ನೀಡಿಲ್ಲ. ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಸದಸ್ಯರನ್ನು ಕತ್ತಲಲ್ಲಿ ಇಟ್ಟು, ಹೊಸ ಆಡಳಿತ ಮಂಡಳಿ ರಚಿಸಲಾಗಿದೆ. ಪದಾಧಿಕಾರಿಗಳ ಹೆಸರುಗಳ ಸ್ವಯಂ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಂಸ್ಥೆಯ ಆಡಳಿತ ಮಂಡಳಿ ಅವಧಿ ಮೂರು ವರ್ಷ ಆಗಿತ್ತು. ಆದರೆ, ಜೂನ್‍ನಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಿ ಬೈಲಾ ತಿದ್ದುಪಡಿ ಮಾಡಿ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಲಾಗಿದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೈಲಾಗೆ ಅನೇಕ ತದ್ದುಪಡಿಗಳನ್ನು ತರಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಶೇಷ ಸಾಮಾನ್ಯ ಸಭೆಯ ಮಾಹಿತಿ ಸಹ ಯಾವ ಸದಸ್ಯರಿಗೂ ಅಧಿಕೃತವಾಗಿ ನೀಡಿಲ್ಲ. ಹೀಗಾಗಿ ಬೈಲಾ ತಿದ್ದುಪಡಿ ಕೂಡ ಕಾನೂನು ಬಾಹೀರವಾಗಿದೆ ಎಂದು ಆರೋಪ ಮಾಡಿದ್ದಾರೆ.

ಚುನಾವಣೆ ಪ್ರಕ್ರಿಯೆಗೆ ಅನುಮೋದನೆ ಪಡೆಯುವ ಉದ್ದೇಶದಿಂದ ನವೆಂಬರ್ 2 ರಂದು ಸಂಸ್ಥೆಯ ವಾರ್ಷಿಕ ಮಹಾಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ಕಾರಣ ಚುನಾವಣೆ ಪ್ರಕ್ರಿಯೆ ಕುರಿತು ತನಿಖೆ ನಡೆಸಬೇಕು. ಸ್ವಯಂ ಘೋಷಿತ ಹೊಸ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಹೊಸದಾಗಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸ್ಥೆಯ ಚುನಾವಣೆಗೆ ಸಂಬಂಧಿಸಿದಂತೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೆ ಸಲ್ಲಿಸಿದ ದೂರಿಗೆ ಸಂಸ್ಥೆಯ 2022 ರಿಂದ 2025 ಅವಧಿಯ ಆಡಳಿತ ಮಂಡಳಿ ಸದಸ್ಯ ರಮೇಶ ಗೋಯಲ್, ಸದಸ್ಯರಾದ ಡಾ. ಬಿ.ಜಿ. ಪಾಟೀಲ ಅಷ್ಟೂರ, ನಾಗಶೆಟ್ಟೆಪ್ಪ ದಾಡಗಿ ಹಾಗೂ ನಾಗರಾಜ ನಂದಗಾಂವ್ ಸಹಿ ಹಾಕಿದ್ದಾರೆ.