ಬೀದರ್: ನಗರದ ಯುವ ಮನಸ್ಸುಗಳನ್ನು ಒಳಗೊಂಡಿರುವ ಬೀದರ್ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್, ನಗರವನ್ನು ಸುಂದರೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ನಗರದ ಬಿದರಿ ವೃತ್ತದ ಸುತ್ತ ಸಸಿಗಳನ್ನು ನೆಡುವ ಮೂಲಕ ಈ ಮಹತ್ತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ.
ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಬಿದರಿ ಕಲೆಯ ಸ್ಮರಣಾರ್ಥವಾಗಿ ಐತಿಹಾಸಿಕ ನಗರದ ಹೈದರಾಬಾದ್ ರಸ್ತೆಯಲ್ಲಿ ನಿರ್ಮಿಸಿರುವ ಬಿದರಿ ವೃತ್ತ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ತನ್ನ ಕಳೆಯನ್ನು ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿಯವರ ನೇತೃತ್ವದಲ್ಲಿ ವೃತ್ತವನ್ನು ಶುಚಿಗೊಳಿಸಿ, ವೃತ್ತದ ಸುತ್ತ ಸಸಿಗಳನ್ನು ನೆಟ್ಟು, ಬಿದರಿ ವೃತ್ತಕ್ಕೆ ಜೀವ ಕಳೆ ತುಂಬಲು ಹೊರಟಿದ್ದಾರೆ.
ಇದೇ ವೇಳೆ ವೃತ್ತದ ಸುಂದರಿಕರಣದ ಮಾಡಲ್ ಫೊಸ್ಟರ ಬಿಡುಗಡೆ ಮಾಡಿದ ರೋಟರಿ ಇಂಟರ್ನ್ಯಾಷನಲ್ 3160 ಜಿಲ್ಲಾ ಗವರ್ನರ್ ಎಂ.ಕೆ ರವೀಂದ್ರ ಮಾತನಾಡಿ, ನಮ್ಮ ಸಿಲ್ವರ್ ಸ್ಟಾರ್ ವತಿಯಿಂದ ಬಿದರಿ ವೃತ್ತವನ್ನು ಸುಂದರಿಕರಣಗೊಳಿಸಲು ಹೊರಟಿರುವುದು ಖುಷಿಯ ವಿಚಾರ. ಸಾಮಾಜಿಕ,ಶೈಕ್ಷಣಿಕ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ನಮ್ಮ ರೋಟರಿ ಸಂಸ್ಥೆಯು, ಇಂತಹ ಮಹತ್ತರ ಕೆಲಸಗಳ ಮೂಲಕ ನಗರವನ್ನ ಸುಂದರವಾಗಿಡಲು ಪರಿಶ್ರಮವಹಿಸುತ್ತದೆ ಎಂದರು.
ರೋಟರಿ ಸಿಲ್ವರ್ ಸ್ಟಾರ್ ನ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ಮಹಾನಗರ ಪಾಲಿಕೆಯ ಒಡಂಬಡಿಕೆಯೊಂದಿಗೆ ನಾವು ಬಿದರಿ ವೃತ್ತದಿಂದ ಹತ್ತಿರದ ಫ್ಲೈ ಓವರ್ ವರೆಗಿನ ರಸ್ತೆಯನ್ನು ಸುಂದರಿಕರಣ ಗೊಳಿಸಲು ಒಂದು ಮಾಡೆಲ್ ತಯಾರಿಸಿದ್ದೇವೆ. ಈ ಕಾರ್ಯವನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ಹಂತದಲ್ಲಿ ವೃತ್ತದ ಸುತ್ತ ಸಸಿ ನೆಟ್ಟಿದ್ದೇವೆ. ಎರಡನೇ ಹಂತದಲ್ಲಿ ವೃತ್ತಕ್ಕೆ ಬಣ್ಣ ಹಚ್ಚುವ ಕೆಲಸ ಮಾಡುತ್ತೇವೆ. ಮೂರನೇ ಹಂತದಲ್ಲಿ ಫ್ಲೈ ಓವರ್ ಕೆಳಗಡೆ ಬಿದರಿ ಕಲೆ ಹಾಗೂ ಜಿಲ್ಲೆಯ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ಪೇಂಟಿಂಗ್ ಮಾಡಿಸುವ ಮೂಲಕ ಅಂತರಾಜ್ಯದಿಂದ ಆಗಮಿಸುವ ಜನರಿಗೆ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.
ಕಾರ್ಯದರ್ಶಿ ಕಿರಣ್ ಸ್ಯಾಮವೆಲ್ ಮಾತನಾಡಿ, ಬಿದರಿ ವೃತ್ತದ ಬ್ಯೂಟಿಫಿಕೇಷನ್ ಗಾಗಿ ವಿನೂತನ ಕಾರ್ಯಕ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಜನರ ಸಹಕಾರದೊಂದಿಗೆ ನಗರದ ಅಂದವನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿಯ ಅಸಿಸ್ಟ್ಂಟ್ ಗವರ್ನರ್ ಹಾವಶೆಟ್ಟಿ ಪಾಟೀಲ್, ಉಪಾಧ್ಯಕ್ಷ ಆನಂದ್ ಕೊಟರ್ಕಿ, ಜಾಯಿಂಟ್ ಸೆಕ್ರೆಟರಿ ಭಾವೇಶ್ ಪಟೇಲ್, ಖಜಾಂಚಿ ಅಮರೇಶ್ ಅಭಸಂಗೆ, ಯೋಜನಾ ನಿರ್ದೇಶಕ ಆನಂದ ಕುಲಕರ್ಣಿ, ಪೂಜಾ ಕೊಂಡಿ, ಕೀರ್ತಿ ವಾಲೆ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕಿ ಸ್ಪೂರ್ತಿ ಧನ್ನೂರ, ಮಾಧ್ಯಮ ಸಂಯೋಜಕಿ ಸಹನಾ ಪಾಟೀಲ, ರಾಘವೇಂದ್ರ ರಿಜೆಂತಲ್, ಮನೀಶ್ ಸಿಂಧೋಲ್, ಮಂಜುನಾಥ ಖೂಬಾ, ಮಾಜಿ ಕಾರ್ಯದರ್ಶಿ ಪೂಜಾ ಸ್ಯಾಮವೆಲ್, ಸೇರಿ ಸಿಲ್ವರ್ ಸ್ಟಾರ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.