ಬೀದರ್: ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಭಾಗದಲ್ಲಿ ಕನ್ನಡ ಬಳಕೆಯ ಸರ್ಕಾರದ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಕನ್ನಡ ಬಳಸದ ನಾಮಫಲಕಗಳನ್ನು ತೆರವುಗೊಳಿಸುವಂತೆ ಬೆಳಿಗ್ಗೆ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆಗ, ಅದಕ್ಕೆ ಒಪ್ಪಿಕೊಂಡಿದ್ದ ಅವರು, ಮಧ್ಯಾಹ್ನ ಮತ್ತೆ ಕಚೇರಿಗೆ ಹೋದಾಗ ಸ್ಪಂದಿಸಲಿಲ್ಲ. ಹೀಗಾಗಿ ಮಧ್ಯಾಹ್ನದಿಂದ ಸಂಜೆವರೆಗೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು ಎಂದು ಧರಣಿ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ್ ತಿಳಿಸಿದರು.
ನಗರದಲ್ಲಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಮಾಲ್ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ನಿಯಮಾನುಸಾರ ಕನ್ನಡ ಬಳಸಲಾಗಿಲ್ಲ. ಅನ್ಯ ಭಾಷೆಗಳೇ ರಾರಾಜಿಸುತ್ತಿವೆ. ಹೀಗಾಗಿ ಅಂತಹ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಆಯುಕ್ತರಿಗೆ ಒತ್ತಾಯಿಸಲಾಯಿತು. ಈ ಕುರಿತು ಆಯುಕ್ತರು ಹಾಗೂ ವೇದಿಕೆ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು ಎಂದು ತಿಳಿಸಿದರು.
ಬಳಿಕ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಆಯುಕ್ತರು, ಮಾರ್ಕೇಟ್ ಸಿಪಿಐ ಮಠಪತಿ ಹಾಗೂ ಪಿಎಸ್‍ಐ ಸಿದ್ದು ಗಿರಿಗೌಡರ ಅವರು ಮಹಾನಗರ ಪಾಲಿಕೆಯಲ್ಲಿ ಒಂದು ತಾಸು ಸಭೆ ನಡೆಸಿದರು. ಬಳಿಕ ಆಯುಕ್ತರು ಈಗಿನಿಂದಲೇ ನಿಯಮ ಪಾಲಿಸದ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿ, ಧರಣಿ ಹಿಂಪಡೆಯಲು ಕೋರಿದರು.
ಅನಂತರ ಕನ್ನಡ ಬಳಸದ ಎಲ್ಲ ನಾಮಫಲಕಗಳನ್ನು ಅಕ್ಟೋಬರ್ 31 ಒಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನವೆಂಬರ್ 1 ರಂದು ವೇದಿಕೆಯಿಂದ ಅಂತಹ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿ ಧರಣಿ ಹಿಂಪಡೆಯಲಾಯಿತು ಎಂದು ತಿಳಿಸಿದರು.
ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಷಾ, ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡಾ, ಪ್ರಮುಖರಾದ ಮಲ್ಲಿಕಾರ್ಜುನ ಬುಧೇರಾ, ನವೀನ್, ವಿನಾಯಕ್ ರೆಡ್ಡಿ, ತುಕಾರಾಮ ಜೈರಾಮ ಸೇರಿದಂತೆ 50 ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.