ಬೀದರ್: ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಹೊರ ತರಲಾದ ಬಿಲ್ವಪತ್ರಿ ಮಹತ್ವ ಕುರಿತ ಕಿರು ಹೊತ್ತಿಗೆಯನ್ನು ಬೆಂಗಳೂರಿನ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ಕಿರು ಹೊತ್ತಿಗೆಯು ಆಧ್ಯಾತ್ಮದಲ್ಲಿ ಬಿಲ್ವಪತ್ರಿಗೆ ಇರುವ ಮಹತ್ವ, ಔಷಧೀಯ ಗುಣಗಳು ಸೇರಿದಂತೆ ಅದರ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ ಎಂದು ಕಿರು ಹೊತ್ತಿಗೆ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ ಹೇಳಿದರು.
ಶಿವಯ್ಯ ಸ್ವಾಮಿ ಅವರು ಮಾತೆ ಕರುಣಾದೇವಿ ಅವರ ಹೆಸರಲ್ಲಿ 1 ಲಕ್ಷ ಸಸಿ ವಿತರಣೆ ಅಭಿಯಾನ ನಡೆಸಿರುವುದು ಶ್ಲಾಘನೀಯ. ಪರಿಸರದ ಉಳಿವಿಗೆ ಈ ರೀತಿಯ ಅಭಿಯಾನಗಳು ನಡೆಯಬೇಕು ಎಂದು ತಿಳಿಸಿದರು.
ಗುರುವಿಗೆ ಗೌರವ ಸಮರ್ಪಿಸುವುದರೊಂದಿಗೆ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲೆಯವರೇ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಅಭಿಯಾನದ ಅಂಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಈವರೆಗೆ 98,500 ಸಸಿಗಳನ್ನು ವಿತರಿಸಲಾಗಿದೆ. ಈ ಪೈಕಿ ಅತಿ ಹೆಚ್ಚು 38 ಸಾವಿರ ಬಿಲ್ವಪತ್ರಿ ಸಸಿಗಳ ವಿತರಣೆ ಮಾಡಲಾಗಿದೆ. ಬಿಲ್ವಪತ್ರಿ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಿರು ಹೊತ್ತಿಗೆ ರಚಿಸಲಾಗಿದೆ ಎಂದು ತಿಳಿಸಿದರು.
ಉದ್ಯಮಿ ವಿದ್ಯಾ ವಿ.ಎಂ., ವಿಶ್ವವಿದ್ಯಾಲಯದ ಪ್ರಸಾರಂಗ ಉಪ ನಿರ್ದೇಶಕ ಗೋವಿಂದ್, ಸಹಾಯಕ ಪ್ರಾಧ್ಯಾಪಕ ಜಯರೇವಣ್ಣ ಮತ್ತಿತರರು ಇದ್ದರು.