ಬೀದರ್: ಬಸವನಗರ ವಿಕಾಸ ಸಮಿತಿ, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ, ವಿದ್ಯಾನಗರ ವಿಕಾಸ ಸಮಿತಿ, ಬಸವ ಸಮಿತಿ ಹಾಗೂ ಗುಮ್ಮೆ ಕಾಲೊನಿ ವತಿಯಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಅ. 30 ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಲಬುರಗಿಯ ಸಾಹಿತಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಉದ್ಘಾಟಿಸುವರು. ಬಸವನಗರ ಮಹಿಳಾ ಮಂಡಳ ಅಧ್ಯಕ್ಷೆ ರತ್ನಾ ಪಾಟೀಲ ಅಧ್ಯಕ್ಷತೆ ವಹಿಸುವರು.
ನಗರಸಭೆ ಸದಸ್ಯರಾದ ಪ್ರೀತಿ ರಾಜೇಶ್, ಸಂತೋಷಿ ಅರುಣಕುಮಾರ, ದಿಗಂಬರ ಮಡಿವಾಳ, ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ, ಗುಮ್ಮೆ ಕಾಲೊನಿ ಅಧ್ಯಕ್ಷ ರಾಜಶೇಖರ ಮಂಗಲಗಿ, ವಿದ್ಯಾನಗರ ಕಾಲೊನಿಯ ಬಸವಣಪ್ಪ ನೇಳಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾವ್ಯಶ್ರೀ ಮಹಾಗಾಂವಕರ್ (ಸಾಹಿತ್ಯ ಕ್ಷೇತ್ರ) ಹಾಗೂ ಮಹಾದೇವಿ ಬಿರಾದಾರ (ಮಹಿಳಾ ಕ್ಷೇತ್ರ) ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದಕ್ಕೂ ಮುನ್ನ ಬಸವನಗರದ ಬಸವೇಶ್ವರ ದೇವಸ್ಥಾನದಿಂದ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ವರೆಗೆ ಚನ್ನಮ್ಮ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಸಾಹಿತಿ ಜಯಶ್ರೀ ಸುಕಾಲೆ ಹಾಗೂ ಮಹಿಳಾ ಪ್ರಮುಖರಾದ ಕಲಾವತಿ ಶಿವರಾಜ ಪಾಟೀಲ ಮೆರವಣಿಗೆಗೆ ಚಾಲನೆ ನೀಡುವರು ಎಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಹಾಗೂ ಅಧ್ಯಕ್ಷ ರಾಜಶೇಖರ ಪಾಟೀಲ ತಿಳಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.