ಬೀದರ್: ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರ 50ನೇ ಜನ್ಮದಿನ ಪ್ರಯುಕ್ತ ಅಭಿನಂದನಾ ಗ್ರಂಥ ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಬಲ್ಲೂರ ಸಂಪಾದಕತ್ವದಲ್ಲಿ ಹೊರ ತರಲು ಅವರ ಶಿಷ್ಯ ಬಳಗ ನಿರ್ಧರಿಸಿದ್ದು, ಲೇಖನಗಳನ್ನು ಆಹ್ವಾನಿಸಿದೆ.
ಅವಧೂತರು ಮೂರು ದಶಕಗಳಿಂದ ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಸಮಾಜೋ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪ್ರವಚನಗಳ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ, ದೇಶ ಪ್ರೇಮ ಬೆಳೆಸುತ್ತಿದ್ದಾರೆ. ಪಾಲಕರಿಗೆ ಸಂಸ್ಕಾರದ ಮಹತ್ವ ಮನವರಿಕೆ ಮಾಡುತ್ತಿದ್ದಾರೆ. ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ಹೀಗಾಗಿ ಅಭಿನಂದನಾ ಗ್ರಂಥದ ಮೂಲಕ ಅವರನ್ನು ಅಭಿನಂದಿಸಲು ನಿರ್ಣಯಿಸಲಾಗಿದೆ ಎಂದು ದೇವೇಂದ್ರ ಕರಂಜೆ ತಿಳಿಸಿದ್ದಾರೆ.
ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಕಾಶಿ, ಶ್ರೀಶೈಲ, ಹಿಮಾಲಯ ಪರ್ವತ ಸೇರಿದಂತೆ ದೇಶದ ವಿವಿಧ ಪವಿತ್ರ ಸ್ಥಳಗಳಲ್ಲಿ ಅನುಷ್ಠಾನ ನಡೆಸಿದ್ದಾರೆ. ಸಾಕಷ್ಟು ಜನರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಅವಿರತ ಶ್ರಮಿಸುತ್ತಿದ್ದಾರೆ. ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿರುವ ಅವರು ಪ್ರಖರ ವಾಗ್ಮಿಯೂ ಆಗಿದ್ದಾರೆ ಎಂದು ಹೇಳಿದ್ದಾರೆ.
ಅವಧೂತರ ಜೀವನ ಹಾಗೂ ಸಾಧನೆಗಳನ್ನು ಬಲ್ಲ ಸಾಹಿತಿಗಳು, ಬರಹಗಾರರು ಹಾಗೂ ಶಿಷ್ಯರು ನವೆಂಬರ್ ಅಂತ್ಯದೊಳಗೆ ಲೇಖನಗಳನ್ನು ಬರೆದು, ಯುನಿಕೋಡ್‍ನಲ್ಲಿ ಟೈಪ್ ಮಾಡಿ, ಇ-ಮೇಲ್ ವಿಳಾಸ
karanjedevendra@gmail.com ಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9241979444 (ದೇವೇಂದ್ರ ಕರಂಜೆ) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.