ಜಿಲ್ಲೆ

ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರಣಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯಲ್ಲಿ ಚರ್ಚ್ ಅಭಿವೃದ್ಧಿ ಹಾಗೂ ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಜಿಲ್ಲೆಯಲ್ಲಿ 2013 ರಿಂದ 2025 ರ ವರೆಗೆ ವಿವಿಧ ಸಂಸ್ಥೆಗಳಿಗೆ ಕಾಮಗಾರಿಗಳಿಗಾಗಿ ಸರ್ಕಾರದಿಂದ ಶೇ 50 ರಷ್ಟು ಅನುದಾನ ಕಲ್ಪಿಸಲಾಗಿದೆ. ಆದರೆ, ಸಂಸ್ಥೆಗಳು ಸರ್ಕಾರದ ಷರತ್ತಿನ ಅನ್ವಯ ತನ್ನ ಪಾಲಿನ ಶೇ 50 ರಷ್ಟು ಅನುದಾನ ಭರಿಸಿಲ್ಲ. ಕಾಮಗಾರಿ ಸಹ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ರೂ. 400 ಕೋಟಿ ವೆಚ್ಚದ ಕಾಮಗಾರಿಗಳ ಪೈಕಿ ಶೇ 15 ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಂಬಂಧಿಸಿದ ಸಂಸ್ಥೆಗಳು ಹಾಗೂ ದಲ್ಲಾಳಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.

ಕೂಡಲೇ ಈ ಕುರಿತು ತನಿಖೆ ನಡೆಸಬೇಕು. ಕಾಮಗಾರಿ ಕೈಗೊಳ್ಳದ ಸಂಸ್ಥೆಗಳಿಂದ ಹಣ ಮರಳಿ ಪಡೆಯಬೇಕು. ಅಂತಹ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ನಿಜಾಂಪುರೆ, ಪ್ರಧಾನ ಕಾರ್ಯದರ್ಶಿಗಳಾದ ಜೈಭೀಮ ಬಂಧು, ಸತೀಶ್ ರಾಠೋಡ್, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ರೆಡ್ಡಿ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಅಲ್ಮಾಜೆ, ಸುಧೇಂದ್ರ ಕುಲಕರ್ಣಿ, ಸೂರಜ್‍ಸಿಂಗ್ ಠಾಕೂರ್, ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು.