ಬೀದರ್: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಎಸ್ಪಿ ಪ್ರದೀಪ್ ಗುಂಟಿ ಅವರಿಗೆ ಮನವಿಪತ್ರ ಸಲ್ಲಿಸಿದ ಪ್ರಮುಖರು, ಸಾರ್ವಜನಿಕ ಸ್ಥಳ ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್ ಎಸ್ ಎಸ್ ಸಂಘಟನೆ ಚಟುವಟಿಕೆ ನಿಷೇಧಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಖರ್ಗೆ ಪತ್ರ ಬರೆದಿದ್ದರು. ಹೀಗಾಗಿ ಅವರಿಗೆ ಕೆಲವರು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಂಥ ಕೃತ್ಯಗಳು ಸಮಾಜದಲ್ಲಿ ಹಿಂಸಾತ್ಮಕ ಮನೋಭಾವ ಬೆಳೆಸುವ ಅಪಾಯವಿದೆ. ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ, ಸಮಾಜದಲ್ಲಿ ಕೊಳಕು ಮನಸ್ಥಿತಿ ಹರಡುವ ಸಂಘಟನೆ ವಿರುದ್ಧವಾಗಿದೆ. ಹೀಗಾಗಿ ಖರ್ಗೆ ಅವರಿಗೆ ಬೆದರಿಕೆ ಕರೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ, ಜಿಲ್ಲಾಧ್ಯಕ್ಷ ರಾಹುಲ್ ಭಂಗೂರೆ, ನಗರಸಭೆ ಸದಸ್ಯ ಸೂರ್ಯಕಾಂತ ಸಾಧುರೆ, ವಿವಿಧ ಸಂಘಟನೆಗಳ ಪ್ರಮುಖರಾದ ಗೋಪಾಲ ದೊಡ್ಡಿ, ಪವನ್ ಮಿಠಾರೆ, ಗೌತಮ ಮುತ್ತಂಗಿಕರ್, ಸುನೀಲ ಚಂದಾ, ಅಶೋಕ ಭಾವಿದೊಡ್ಡೆ, ಜಗನ್ನಾಥ ಹೊನ್ನಾ ಇತರರಿದ್ದರು.