ಬೀದರ್: ಅತಿವೃಷ್ಟಿ, ಪ್ರವಾಹದಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಹೆಕ್ಟೇರ್ ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು.
ಕಮಠಾಣ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಜಿಲ್ಲಾದ್ಯಂತ 1.65 ಲಕ್ಷ ಹೆಕ್ಟೇರ್ ಕೃಷಿ ಹಾಗೂ 1300 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಮುಖವಾಗಿ ಉದ್ದು, ಹೆಸರು, ಸೋಯಾಬೀನ್, ತೊಗರಿ ಅಧಿಕ ನಷ್ಟವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಬೆಳೆ ಹಾನಿ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದರೂ ಈವರೆಗೆ ಪರಿಹಾರ ನೀಡಿಲ್ಲ. ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಟಿಯಿಂದ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದೆ. ಇದೀಗ ಹಿಂಗಾರು ಬಿತ್ತನೆ ಪ್ರಾರಂಭವಾಗಲಿದ್ದು, ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ನೀಡಿದರೆ ಬಿತ್ತನೆಗೆ ಅನುಕೂಲವಾಗಲಿದೆ. ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ರೈತರು ದೇಶದ ಬೆನ್ನೆಲುಬು. ಉತ್ತಮ ಬೆಳೆ ಬೆಳೆದರೆ ಮಾತ್ರ ಪ್ರತಿಯೊಬ್ಬರೂ ಒಳ್ಳೆಯ ಜೀವನ ನಡೆಸಲು ಸಾಧ್ಯ. ಸರ್ಕಾರ ಅನ್ನದಾತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೃಷಿ ಕ್ಷೇತ್ರಕ್ಕೆ ಎಲ್ಲ ರೀತಿಯ ಸೌಲಭ್ಯ ನೀಡಿದರೆ ಉದ್ಯೋಗ ಅರಸಿ ವಲಸೆ ಹೋಗುವುದು ತಪ್ಪಲಿದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್, ಕೃಷಿ ಅಧಿಕಾರಿ ಸೌಮ್ಯ, ಪ್ರಮುಖರಾದ ಕುಶಾಲ ಯಾಬಾ, ನಾಗಭೂಷಣ ಕಮಠಾಣೆ, ಗುರುನಾಥ ಬಗದಲ್, ಬಸವರಾಜ ಕ್ಯಾಸಾ, ಉಮೇಶ ಯಾಬಾ, ಉದಯ ಮಹಾರಾಜ, ಶಂಕರ, ಖಮರೊದ್ದೀನ್, ವಿನೋದ, ಸಂತೋಷ ಶಂಭು ಇತರರಿದ್ದರು.