ಜಿಲ್ಲೆ

ನಾಟ್ಯ ವೈಭವಕ್ಕೆ ಮನಸೋತ ಪ್ರೇಕ್ಷಕರು

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಾಟ್ಯಶ್ರೀ ನೃತ್ಯಾಲಯವು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ದಸರಾ ನೃತ್ಯೋತ್ಸವ ಹಾಗೂ ಹಾಸ್ಯೋತ್ಸವದಲ್ಲಿ ಕಲಾ ಲೋಕವೇ ಅನಾವರಣಗೊಂಡಿತು. ನೃತ್ಯ ವೈಭವವು ನೆರೆದಿದ್ದ ಪ್ರೇಕ್ಷಕರು ಮನ ಸೋಲುವಂತೆ ಮಾಡಿತು.

ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನೇತೃತ್ವದ ಕಲಾವಿದರ ತಂಡವು ವಿವಿಧ ನೃತ್ಯಗಳನ್ನು ಪ್ರದರ್ಶಿಸಿ ಕಲಾ ಸಿರಿವಂತಿಕೆಯನ್ನು ಅನಾವರಣಗೊಳಿಸಿತು.

ಭರತ ನಾಟ್ಯ, ಗರ್ಭಾ ನೃತ್ಯ, ಜಾನಪದ ನೃತ್ಯ, ಮರಾಠಿ ನೃತ್ಯ, ದೇಶಭಕ್ತಿ ಗೀತೆ ನೃತ್ಯ, ಮಹಿಷ ಮರ್ದಿನಿ ನೃತ್ಯ ರೂಪಕ ಮನಸೂರೆಗೊಂಡವು.

30ಕ್ಕೂ ಹೆಚ್ಚು ಕಲಾವಿದರ ‘ಹಚ್ಚೇವು ಕನ್ನಡದ ದೀಪ…’ ಆಕರ್ಷಕ ನೃತ್ಯದೊಂದಿಗೆ ನೃತ್ಯೋತ್ಸವ ಆರಂಭಗೊಂಡಿತು.

ಅಷ್ಟಲಕ್ಷ್ಮಿ ನೃತ್ಯ, ವಿಷ್ಣು ದಶಾವತಾರ ನೃತ್ಯ, ‘ನೀನೊಲಿದರೆ ಕೊರಡು ಕೊನರುವುದಯ್ಯ' ವಚನ ನೃತ್ಯ, ‘ಭಾರತಾಂಬೆ ಹೆಮ್ಮೆಯ ಮಕ್ಕಳು ನಾವು' ದೇಶಭಕ್ತಿ ಗೀತೆ ನೃತ್ಯ, ನವ ದುರ್ಗೆಯರ ಮರಾಠಿ ನೃತ್ಯ, ಸಂತ ಶಿಶುನಾಳ ಷರೀಫರ ‘ಏನ್ ಕೊಡ ಏನ್ ಕೊಡವ ಹುಬ್ಬಳ್ಳಿ ಮಾಟ’ ಗೀತೆ ನೃತ್ಯ, ಅಘೋರಿU ನೃತ್ಯ, ಕೋಲಾಟ, ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ ಅವರ ‘ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು...’ ಸುಮಧುರ ಗೀತೆ ಸಭಿಕರ ಮೆಚ್ಚುಗೆಗೆ ಪಾತ್ರವಾದವು.

ಭಾನುಪ್ರಿಯ ಅರಳಿ ನಾಡಗೀತೆ ಹಾಗೂ ಬೇಂದ್ರೆಯವರ ಕವನ ‘ನೀ ಹಿಂಗ ನೋಡಬೇಡ ನನ್ನ, ನೀ ಹಿಂಗ ನೋಡಿದರೆ ನನ್ನ, ತಿರುಗಿ ನಾ ಹೆಂಗ ನೋಡಲಿ ನಿನ್ನ..’ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.

ವಿವಿಧ ನೃತ್ಯ ಕಲಾ ಪ್ರದರ್ಶನದಲ್ಲಿ ಮಕ್ಕಳು, ಪಾಲಕರು ಸೇರಿದಂತೆ 78 ಕಲಾವಿದರು ಪಾಲ್ಗೊಂಡರು.

ಅನುಭವದ ಸಾಹಿತ್ಯ ರಚನೆಯಾಗಲಿ: ಅನುಭವದ ಸಾಹಿತ್ಯ ರಚಿಸುವ ಅಗತ್ಯವಿದೆ ಎಂದು ಬೇಂದ್ರ ದರ್ಶನ ಕುರಿತು ಉಪನ್ಯಾಸ ನೀಡಿದ ಧಾರವಾಡದ ಚಲನಚಿತ್ರ ನಟ ಅನಂತಕೃಷ್ಣ ದೇಶಪಾಂಡೆ (ಬೇಂದ್ರೆ) ಹೇಳಿದರು.

ದ.ರಾ. ಬೇಂದ್ರೆ ಅವರು ತಾವು ನೋಡಿದ, ಅನುಭವಿಸಿದ, ಗ್ರಹಿಸಿದ ಸಂಗತಿಗಳಿಗೆ ಕವನ, ಕಥೆ ಸ್ವರೂಪ ನೀಡುತ್ತಿದ್ದರು ಎಂದು ಸ್ಮರಿಸಿದರು.

ಬೇಂದ್ರೆ ಅವರು ತಮ್ಮ ಮಗಳ ಅನಾರೋಗ್ಯದ ವೇಳೆ ರಚಿಸಿದ ಗೀತೆ, ಬ್ರಿಟಿಷರು ಜೈಲಿಗೆ ಹಾಕಿದಾಗ ಕವನ ರಚನೆಗೆ ಕಾರಣವಾದವರು ಯಾರು ಎಂದು ವಿವರಿಸಿದ ಪರಿ ಮೊದಲಾದವುಗಳನ್ನು ಮೆಲುಕು ಹಾಕಿದರು.

ಕೆಲ ಹೊತ್ತು ಬೇಂದ್ರೆ ಅವರ ಧಾಟಿಯಲ್ಲೇ ಮಾತನಾಡಿ, ಗಾಯನ ಮಾಡಿ ಗಮನ ಸೆಳೆದರು.

ಕನ್ನಡ ಪ್ರಪಂಚದ ಅತ್ಯುತ್ತಮ ಭಾಷೆಯಾಗಿದೆ ಎಂದು ಕನ್ನಡವೆಂಬ ಸೊಬಗು ಕುರಿತು ಮಾತನಾಡಿದ ಮೈಸೂರಿನ ಖ್ಯಾತ ಸಾಹಿತಿ, ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ ಬಣ್ಣಿಸಿದರು.

ಕನ್ನಡ ಭಾಷೆಯೇ ಚೆಂದ ಆಗಿರುವುದರಿಂದ ಕವಿತೆಗಳೂ ಚೆಂದವಾಗಿಯೇ ಮೂಡಿ ಬರುತ್ತವೆ ಎಂದು ತಿಳಿಸಿದರು.

ಆಂಗ್ಲ ಭಾಷೆ ವ್ಯಾಮೋಹದ ನಡುವೆಯೂ ಕನ್ನಡ ಭಾಷೆಯನ್ನು ಉಳಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಗ್ರಾಮೀಣ ಸೊಗಡಿನಲ್ಲಿ ಹಾಸ್ಯ ಹಾಸು ಹೊಕ್ಕಿರುವುದನ್ನು ವಿವರಿಸಿ, ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.

ಸದಾನಂದ ಜೋಶಿ, ಕೆ. ಕಿರಣಮೂರ್ತಿ ಹಾಗೂ ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಿ, ಸಮಾಜ ಸೇವಕಿ ನೀತಾ ಎಸ್. ಬೆಲ್ದಾಳೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಹಾಯಕ ಕೃಷಿ ನಿರ್ದೇಶಕಿ ಡಾ. ಆರತಿ ಪಾಟೀಲ ಉಪಸ್ಥಿತರಿದ್ದರು.

ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ಸ್ವಾಗತಿಸಿದರು. ಬಸವರಾಜ ಮೂಲಗೆ, ರಾಘವೇಂದ್ರ ಅಡಿಗ, ದೇವಿದಾಸ ಜೋಶಿ ಹಾಗೂ ಸ್ವರೂಪರಾಣಿ ನಾಗೂರೆ ನಿರೂಪಿಸಿದರು.

ರಂಗ ಮಂದಿರ ಕಲಾಭಿಮಾನಿಗಳಿಂದ ತುಂಬಿ ತುಳುಕಿತ್ತು. ಅವರ ಚಪ್ಪಾಳೆ ಸದ್ದು ನೃತ್ಯ ಕಲಾವಿದರನ್ನು ಪ್ರೋತ್ಸಾಹಿಸಿ, ಹುರಿದುಂಬಿಸಿತು.