ಜಿಲ್ಲೆ

ರೂ.1.50 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ 42 ಕಳವು ಪ್ರಕರಣಗಳಲ್ಲಿ 57 ಜನರನ್ನು ಬಂಧಿಸಿ, ಅವರಿಂದ ಒಟ್ಟು 1.50 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದರು.

ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ 9 ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಬೇಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಭಾಲ್ಕಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವಿವಿಧೆಡೆ ನಡೆದ ಕಳವು ಪ್ರಕರಣ ಸಂಬಂಧ 13 ಆರೋಪಿಗಳನ್ನು ಬಂಧಿಸಲಾಗಿದೆ. 13.32 ಲಕ್ಷ ರೂ. ಮೌಲ್ಯದ ನಗದು, ಬಂಗಾರ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿನ ನೂತನ ನಗರ ಠಾಣೆಯಲ್ಲಿ ಒಟ್ಟು 18 ಬೈಕ್ ಕಳುವು ಪ್ರಕರಣ ಪತ್ತೆಯಾಗಿದ್ದು, 13.60 ಲಕ್ಷ ರು. ಮೌಲ್ಯದ 18 ವಾಹನಗಳನ್ನು ಜಪ್ತಿ ಮಾಡಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಹುಮನಾಬಾದ್ ಠಾಣೆ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ ಮೂಲಕ ವ್ಯಕ್ತಿ ಸುಮಾರು 8 ಹೊಸ ಮಾದರಿಯ ಕಾರುಗಳನ್ನು ಕಳುವು ಮಾಡಿ ಸಿಕ್ಕಿ ಬಿದ್ದಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಕಳುವು ಮಾಡಿದ ಕಾರುಗಳಲ್ಲಿ 2 ಮಹಾರಾಷ್ಟ್ರ, ಒಂದು ಕರ್ನಾಟಕದ್ದಾಗಿದೆ. ಉಳಿದ ಕಾರುಗಳ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.

ಹುಮನಾಬಾದ್, ಬಸವಕಲ್ಯಾಣ. ಔರಾದ್, ಹೋಕ್ರಾಣಾ ಠಾಣಾ ಹೀಗೆ ವಿವಿಧೆಡೆ ಕಳುವು ಪ್ರಕರಣಗಳನ್ನು ಬೇಧಿಸಿ, 57 ಜನರನ್ನು ಬಂಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಜಪ್ತಿಯಾದ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿವಿಧ ಠಾಣೆಯ ಸಿಪಿಐಗಳು ಇದ್ದರು.