ಬೀದರ್: ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ ಅಹಿಂಸೆ, ಸತ್ಯ ಮತ್ತು ಸರಳತೆಯಿಂದ ಕೂಡಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ ಮಹಾತ್ಮ ಗಾಂಧೀಜಿ ಅವರ 156ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರು ಶಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ನುಡಿದಂತೆ ನಡೆದರು. ಹೀಗಾಗಿ ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತೆವೆ ಎಂದರು.
ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟ ಮಾಡಿದ್ದರು. ಭಾರತದಲ್ಲಿ ದಂಡಿ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ಚಿಟ್ ಇಂಡಿಯಾ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಭಾರತದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಸವರಾಜ ಬಲ್ಲೂರ ಉಪನ್ಯಾಸ ನೀಡಿದರು. ಸಹಾಯಕ ಆಯುಕ್ತ ಮಹ್ಮದ್ ಶಕೀಲ್, ಜಿಪಂ ಮುಖ್ಯ ಯೋಜನಾಧಿಕಾರಿ ಕಿಶೋರ ದುಬೆ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್, ಶಾಲಾ ಶಿಕ್ಷಣ ಇಲಾಖೆ ಸಹಾಯಕ ಯೋಜನಾಧಿಕಾರಿ ಹುಡಗೆ ಗುಂಡಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ವಿಜಯಕೃಷ್ಣ, ನರೇಶಕುಮಾರ, ತನ್ವೀರ್ ಇಕ್ಬಾಲ್, ಗೀತಮ್ಮ, ನಾಗಶೆಟ್ಟಿ, ಆಶೀಶ್ ಹಜಾರೆ, ಜಗನ್ನಾಥ ಜಮಾದಾರ್, ಅವಿನಾಶ ಇತರರಿದ್ದರು.
ಪ್ರಬಂಧ ಸ್ಪರ್ಧೆ ವಿಜೇತರು
ಮಹಾತ್ಮ ಗಾಂಧಿ ಜಯಂತಿ ನಿಮಿತ್ತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರೌಢ ಶಾಲೆ, ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಪ್ರೌಢ ಶಾಲೆ: ತೃಪ್ತಿ ಪಾಟೀಲ್ (ಪ್ರಥಮ), ಗಾಯತ್ರಿ ಶಶಿಕಾಂತ (ದ್ವಿತೀಯ), ಅನುಷ್ಕಾ (ತೃತೀಯ). ಪದವಿಪೂರ್ವ ಕಾಲೇಜು: ಗಾಯತ್ರಿ ಕಾಳಪ್ಪ (ಪ್ರಥಮ), ಮಹೇಶ್ವರ ಪಂಢರಿ (ದ್ವಿತೀಯ), ಗುಂಡಮ್ಮಾ ಶರಣಪ್ಪ (ತೃತೀಯ). ಪದವಿ: ಪೀಟರ್ ಸಂಜುಕುಮಾರ (ಪ್ರಥಮ), ಭಾಗ್ಯಶ್ರೀ ಕಲ್ಯಾಣರಾವ (ದ್ವಿತೀಯ), ಪಲ್ಲವಿ ಪ್ರಭು (ತೃತೀಯ) ವಿಜೇತರಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿಜೇತರನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಿದರು.