ಬೀದರ್: ವಿಜಯದಶಮಿ ಅಂಗವಾಗಿ ಧ್ವಜ ಉತ್ಸವ ನಿಮಿತ್ತ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ಧಾರ್ಮಿಕ ಧ್ವಜದ ಮೆರವಣಿಗೆ ಗುರುವಾರ ಭಕ್ತಿ, ಶ್ರದ್ಧೆಯಿಂದ ನಡೆಯಿತು.
ಸಿದ್ಧೇಶ್ವರ ದೇವಸ್ಥಾನದ ಪೀಠಾಧಿಕಾರಿ ಅವರ ಮನೆಯಿಂದ ದೇವಸ್ಥಾನದ ವರೆಗೆ ಧ್ವಜದ ಮೆರವಣಿಗೆ ಜರುಗಿತು. ಬಳಿಕ ಆಲದ ಮರ ಹಾಗೂ ಹುಣಸೆ ಮರಗಳಿಗೆ ಧ್ವಜ ಕಟ್ಟಲಾಯಿತು. ಸಿದ್ಧೇಶ್ವರ ಹಾಗೂ ಗುರು ಮಲ್ಲಿಕಾರ್ಜುನರಿಗೆ ನೈವೇದ್ಯ ಅರ್ಪಿಸಲಾಯಿತು.
ಧ್ವಜ ಉತ್ಸವ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಪೀಠಾಧಿಕಾರಿಯಾಗಿದ್ದ ಸಿದ್ಧಲಿಂಗಯ್ಯ ಸ್ವಾಮಿ ಪೂಜಾರಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಪೂಜಾರಿ ಧ್ವಜ ಉತ್ಸವ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪ್ರಶಾಂತಯ್ಯ ಸ್ವಾಮಿ ಪೂಜಾರಿ ತಿಳಿಸಿದರು.
ಪ್ರಧಾನ ಅರ್ಚಕರಾದ ಸಿದ್ದಯ್ಯ ನಾಗಯ್ಯ ಸ್ವಾಮಿ ಪೂಜಾರಿ, ಪ್ರಮುಖರಾದ ಗದಗಯ್ಯ ಸ್ವಾಮಿ, ರಾಜಕುಮಾರ ಬಾಬಯ್ಯ, ಗುರುಶಾಂತಯ್ಯ, ಶ್ರೀಕಾಂತಯ್ಯ, ವಿಶ್ವನಾಥ, ಆಕಾಶ ಮತ್ತಿತರರು ಭಾಗವಹಿಸಿದ್ದರು.