ಬೀದರ್: ಶಿವಯೋಗ ನಿಜವಾದ ಸಾಧನೆ ಪ್ರಕ್ರಿಯೆ ಆಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಸುಳೊಳ್ಳಿ ಹೇಳಿದರು.
ನಗರದ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಅಂಗವಾಗಿ ನಡೆದ ಇಷ್ಟಲಿಂಗ ತಾಂತ್ರಿಕತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜ್ಞೆ ಸಹಿತವಾಗಿ ಬ್ರಹ್ಮಾಂಡದ ರಹಸ್ಯ ಅರಿಯಲು ಶರಣರ ಶಿವಯೋಗ ಮಾರ್ಗದಲ್ಲಿ ತೊಡಗಬೇಕು. ಆಕಳ ತುಪ್ಪದ ಕಾಡಿಗೆ, ಸಿಲಿಕಾನ್‍ಗಳಿಂದ ತಯಾರಾದ ಇಷ್ಟಲಿಂಗ ದೃಷ್ಟಿ ಯೋಗಕ್ಕೆ ಪೂರಕವಾಗಿ ವಿಶ್ವ ಶಕ್ತಿಯನ್ನು ಹೀರಿಕೊಳ್ಳುವ ಸಾಮಥ್ರ್ಯ ಪಡೆದಿದೆ ಎಂದು ತಿಳಿಸಿದರು.
ಇಷ್ಟಲಿಂಗ ಯಂತ್ರ ಹಾಗೂ ತಂತ್ರ ಎರಡೂ ಹೌದು. ಇಷ್ಟಲಿಂಗವಿದ್ದರೆ ಬೇರೇನೂ ಚಿಂತಿಸಬೇಕಿಲ್ಲ. ಯುವ ಸಮುದಾಯಕ್ಕೆ ಶಿವಯೋಗದ ರುಚಿ ಹಚ್ಚಬೇಕಾಗಿದೆ ಎಂದು ಹೇಳಿದರು.
ಶಿವಯೋಗ ಮಾರ್ಗದಲ್ಲಿರುವವರು ತಪ್ಪು ದಾರಿಗೆ ಹೋಗಲಾರರು. ಅಸಂಖ್ಯಾತರಲ್ಲಿ ಶಿವಯೋಗ ಜಾಗೃತಿ ಮೂಡಿಸಿದ ಅಕ್ಕ ಅನ್ನಪೂರ್ಣತಾಯಿ ಅವರ ಕಾರ್ಯ ಪ್ರಶಂಸನೀಯ ಎಂದರು.
ಶಿವಯೋಗ ಸಾಧಕ ಮಲ್ಲಿಕಾರ್ಜುನ ರಟಕಲೆ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರ ಮಾರ್ಗದರ್ಶನದಿಂದ ಹಲವು ಗಂಟೆಗಳ ಕಾಲ ಶಿವಯೋಗದಲ್ಲಿ ಮಗ್ನನಾಗುವ ಕಲೆ ನನಗೆ ಕರಗತವಾಗಿದೆ ಎಂದು ತಿಳಿಸಿದರು.
ಕಾಲವನರಿಯದೆ ಮತ್ತು ದೇಶವನರಿಯದೆ ಲಿಂಗಪೂಜೆಗೈಯ್ಯುವುದು ಮುಖ್ಯ. ಶಿವಯೋಗದಿಂದ ಶರೀರ ಹಗುರವಾಗಿ, ರೋಗ ಮುಕ್ತವಾಗುತ್ತದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪರುಷ ಕಟ್ಟೆಯ ಚನ್ನಬಸವಣ್ಣ ಮಾತನಾಡಿ, ಸುತ್ತ ಮುತ್ತೆಲ್ಲ ಮುಕ್ತಿ ಚೆಲ್ಲಿದೆ. ಅದು ಗುರು ತೋರಿದರೆ ಮಾತ್ರ ಕಾಣುವುದು. ಮಾಯೆ, ಮೋಹದಲ್ಲಿರುವವರು ದೇವರನ್ನು ಕಾಣಲಾರರು. ಸತ್ಯದ ದಾರಿಯಲ್ಲಿರುವವರಿಗೆ ದೇವನೊಲುಮೆ ಸಾಧ್ಯ ಎಂದು ಹೇಳಿದರು.
ಬಸವಣ್ಣನವರು ಇಷ್ಟಲಿಂಗದ ಮೂಲಕ ಜಾತಿ ಅಳಿಸಲು ಹೋರಾಡಿದರೆ ಇಂದಿನ ಸರ್ಕಾರ ಜಾತಿ ಗಣತಿ ನಡೆಸಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿರುವುದು ದುರದೃಷ್ಟಕರ. ಬಸವಣ್ಣನವರನ್ನು ಸಾಂಸ್ಕøತಿಕ ನಾಯಕನೆಂದು ಒಪ್ಪಿಕೊಂಡ ಸರ್ಕಾರ ಜಾತಿ ಅಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಾಂತಾ ಜೈರಾಜ ಖಂಡ್ರೆ ಮಾತನಾಡಿ, ಲಿಂಗಾಯತ ಧರ್ಮದ ಲಾಂಛನ ಇಷ್ಟಲಿಂಗ. ಅದು ಅರಿವಿನ ಕುರುಹು. ಏಕ ಪ್ರಕಾರವಾಗಿ ತೈಲ ಧಾರೆಯಂತೆ ಅನುಸಂಧಾನ ಮಾಡಿದರೆ ಅದರ ಲಾಭ ಸಿಗುತ್ತದೆ ಎಂದು ತಿಳಿಸಿದರು.
ನೀಲಮ್ಮನ ಬಳಗದ ಮಧುಲತಾ ಖಪಲೆ, ಶಿವಲೀಲಾ ಹೊಕ್ರಾಣೆ, ಶರಣಪ್ಪ ರಾಗಾ, ಸಾಹಿತಿ ರಮೇಶ ಮಠಪತಿ ಇದ್ದರು.
ನೀಲಮ್ಮನ ಬಳಗದ ಶ್ಯಾಮಲಾ ಎಲಿ ಹಾಗೂ ನೀಲಮ್ಮ ರೂಗನ್ ವಚನ ಗಾಯನ ಮಾಡಿದರು. ಬಸವ ಚಿಕಲಿಂಗೆ ನಿರೂಪಿಸಿದರು. ಶಿವಕುಮಾರ ಪಾಖಾಲ್ ಸ್ವಾಗತಿಸಿದರು. ರೇಣುಕಾ ಭಕ್ತರಾಜ ಖಂಡ್ರೆ ಭಕ್ತಿ ದಾಸೋಹಗೈದರು.