ಬೀದರ್: ಮಹಾ ಮಳೆಯಿಂದ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳ ಲಕ್ಷಾಂತರ ಎಕರೆ ಭೂಮಿಯಲ್ಲಿ ಸಂಭವಿಸಿರುವ ಬೆಳೆ ಹಾನಿಗೆ ಎನ್.ಡಿ.ಆರ್.ಎಫ್. ಎಸ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿಯಾಗಿ 8500 ರೂ. ಘೋಷಿಸಿರುವ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬೀದರ್ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಭಾಗದ ಸಚಿವರ, ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಇಂದು ಬೀದರ್ ಮಳೆ ಹಾನಿ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ರೈತ ಪರ ಕಾಳಜಿಯ ಮುಖ್ಯಮಂತ್ರಿಗಳು, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚುವರಿಯಾಗಿ 8500 ರೂ. ಘೋಷಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್.ಡಿ.ಆರ್.ಎಫ್. ನಿಯಮಗಳಂತೆ ಕುಷ್ಕಿ, ನೀರಾವರಿ ಜಮೀನು ಹಾಗೂ ಬಹು ಬೆಳೆ ಹಾನಿಗೆ ಕ್ರಮವಾಗಿ ಪ್ರತಿ ಹೆಕ್ಟೇರ್ ಗೆ 8500, 17000 ಹಾಗೂ 25500 ಪರಿಹಾರ ಇದೆ. ಇದರ ಜೊತೆಗೆ ಮುಖ್ಯಮಂತ್ರಿಯವರು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ಗೆ 8500 ರೂ. ಘೋಷಿಸಿ ರೈತರ ನೆರವಿಗೆ ನಿಂತಿದ್ದಾರೆ. ಇದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಬೆಳೆ ಹಾನಿಯ ಜೊತೆಗೆ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಮೂಲಸೌಕರ್ಯ ಮರು ನಿರ್ಮಾಣ, ದುರಸ್ತಿಗೂ ರಾಜ್ಯ ಸರ್ಕಾರ ಕ್ರಮ ವಹಿಸಲಿದೆ, ಮಹಾ ಮಳೆಯಿಂದ ತೀವ್ರ ಬಾಧಿತವಾಗಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಕೂಡ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.
ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಬಿಟ್ಟಿರುವ ಕಾರಣ ಬೀದರ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜಮೀನುಗಳು ಜಲಾವೃತವಾಗಿದ್ದು, ಮಣ್ಣು ಕೊಚ್ಚಿಹೋಗಿದೆ. ಇದರಿಂದ ಭೂಮಿ ಸತ್ವವೇ ಕಳೆದುಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಹೆಚ್ಚಿನ ಪರಿಹಾರ ಘೋಷಿಸಬೇಕು ಎಂದು ತಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿ ಹೆಚ್ಚಿನ ಪರಿಹಾರ ಘೋಷಿಸಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರೈತರಪರ ಸರ್ಕಾರವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸಂಕಷ್ಟದಲ್ಲಿರುವ ರೈತರೊಂದಿಗೆ ಸರ್ಕಾರ ಮತ್ತು ತಾವು ನಿಲ್ಲುವುದಾಗಿಯೂ ಈಶ್ವರ ಖಂಡ್ರೆ ಆಶ್ವಾಸನೆ ನೀಡಿದ್ದಾರೆ.