ಜಿಲ್ಲೆ

ಅಂಬೇಡ್ಕರ್ ವಿಚಾರಧಾರೆ ಆರ್ಥಿಕತೆ ಬೆಳವಣಿಗೆಗೆ ಸಹಕಾರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ ವಿಚಾರಧಾರೆಗಳು ದೇಶದ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಬಿ. ಬಿರಾದಾರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಬುಧವಾರ ನಡೆದ ಭಾರತದಲ್ಲಿ ಆರ್ಥಿಕ ಸಮಾನತೆ ಸಾಧಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಕುರಿತ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಆರ್ಥಿಕ ತಜ್ಞರೂ ಆಗಿದ್ದರು. ಹೀಗಾಗಿ ಅವರ ಆರ್ಥಿಕ ವಿಚಾರಧಾರೆಗಳ ಕುರಿತು ಚರ್ಚೆ ಆಗಬೇಕು ಎಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸಾಬೇರ್ ಅಹಮ್ಮದ್ ಮುಲ್ಲಾ ಮಾತನಾಡಿ, ಅಂಬೇಡ್ಕರ್ 33 ಪದವಿ, ನಾಲ್ಕು ಪಿಎಚ್‍ಡಿ ಪಡೆದಿದ್ದರು. ಅತ್ಯಂತ ಜ್ಞಾನಿಯಾಗಿದ್ದರು. ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣ ಮಾತನಾಡಿ, ಸಂವಿಧಾನದಿಂದ ದೇಶ ಸುವ್ಯವಸ್ಥಿತವಾಗಿ ನಡೆಯಲು ಹಾಗೂ ಎಲ್ಲರಿಗೂ ಅವಕಾಶ ಸಿಗಲು ಸಾಧ್ಯವಾಗಿದೆ. ಸಂವಿಧಾನ ರಚನೆಯಲ್ಲಿ ಡಾ. ಅಂಬೇಡ್ಕರ್ ಕೊಡುಗೆ ಪ್ರಮುಖವಾಗಿದೆ ಎಂದು ಹೇಳಿದರು.

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹಾವಗಿರಾವ್ ಮೈಲಾರೆ ಮಾತನಾಡಿ, ದೇಶದ ಆರ್ಥಿಕತೆ ಸುಧಾರಣೆಯಲ್ಲಿ ಅಂಬೇಡ್ಕರ್ ಅವರ ತತ್ವ ಹಾಗೂ ನೀತಿಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಂಜೀವಕುಮಾರ ಗಿರಿ ಅವರು, ಅಂಬೇಡ್ಕರ್ ಅಧ್ಯಯನ ಕೇಂದ್ರದ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು.

ಕೊಲ್ಹಾಪುರದ ಪ್ರೊ. ಪಿ.ಎಸ್. ಕಾಂಬಳೆ, ಪ್ರೊ. ಪಿ. ಕಣ್ಣನ್, ಡಾ. ಸಕ್ಪಾಲ್ ಹೂವಣ್ಣ, ಡಾ. ಡಿ.ಎಂ. ಮದರಿ, ಪ್ರೊ. ಮನೋಜಕುಮಾರ, ಡಾ. ವಿದ್ಯಾ ಪಾಟೀಲ, ಮನೋಹರ ಮೇತ್ರೆ, ಭೀಮಷಾ ಬಿ., ಪ್ರೊ. ಎಸ್.ಬಿ. ಕಾಮಶೆಟ್ಟಿ, ಅನಿಲಕುಮಾರ ಮೇಲ್ದೊಡ್ಡಿ, ಡಾ. ದೇವಿದಾಸ ತುಮಕುಂಟೆ, ಪ್ರೊ. ಸುಚಿತಾನಂದ ಮಲ್ಕಾಪುರೆ, ಈಶ್ವರ ರೆಡ್ಡಿ, ಡಾ. ಪಂಡಿತ ಗಂಗಶೆಟ್ಟಿ, ಡಾ. ಸಂಗಪ್ಪ ತೌಡಿ, ಡಾ. ನಾಗೇಂದ್ರಪ್ಪ, ಪ್ರೇಮತಲಾ, ರೇಣುಕಾ ಕೋಲಗುತ್ತೆ, ಪ್ರಿಯಾಂಕ, ಅರ್ಚನಾ, ಡಾ. ಅನ್ನಪೂರ್ಣ ಇದ್ದರು.

ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್. ವಿ. ಗಂಗಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರು. ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ವಂದಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.