ಜಿಲ್ಲೆ

ಗೊಂದಲ ಬೇಡ: ಲಿಂಗಾಯತ ಬರೆಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗವಂತರು ಯಾವುದೇ ಗೊಂದಲಕ್ಕೆ ಒಳಗಾಗದೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಬೇಕು ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ನಗರದ ಬಸವಗಿರಿಯಲ್ಲಿ ನಡೆದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಧಾರ್ಮಿಕವಾಗಿ ಲಿಂಗಾಯತವು ಸ್ವತಂತ್ರ ಧರ್ಮವಾಗಿದೆ. ಹೀಗಾಗಿ ಧರ್ಮ ಮತ್ತು ಜಾತಿ ಕಾಲಂ ಎರಡರಲ್ಲೂ ಲಿಂಗಾಯತ ನಮೂದಿಸಬೇಕು. ಉಪ ಜಾತಿ ಕಾಲಂನಲ್ಲಿ ತಮ್ಮ ಕಾಯಕ ಅಥವಾ ಉಪ ಜಾತಿಯನ್ನು ಬರೆಸಬೇಕು ಎಂದು ತಿಳಿಸಿದರು.

ಸಮಾಜ ಬಾಂಧವರು ಈಗಲಾದರೂ ಒಂದಾಗಬೇಕು. ಸಮಾಜದ ಸರಿಯಾದ ಸಂಖ್ಯೆ ನಮೂದಿಸಿದರೆ ಮಾತ್ರ ಸಮಾಜದ ಎಲ್ಲ ಸ್ತರಗಳಲ್ಲೂ ಸೂಕ್ತ ಸ್ಥಾನಮಾನ ಲಭಿಸುತ್ತದೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸುವುದರಿಂದ ಈಗಾಗಲೇ ಪಡೆಯುತ್ತಿರುವ ಮೀಸಲಾತಿಗೆ ಯಾವುದೇ ಧಕ್ಕೆ ಇಲ್ಲ. ಇದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಸಮಾಜದ ಗೊಂದಲದ ಫಲವಾಗಿ 2 ಕೋಟಿ ಜನಸಂಖ್ಯೆ ಹೊಂದಿದ್ದರೂ ಲಿಂಗಾಯತರ ಜನಸಂಖ್ಯೆ 50 ಲಕ್ಷ ಎಂದು ಹೇಳಲಾಗುತ್ತಿದೆ. ಇದೊಂದು ಷಡ್ಯಂತ್ರ. ಇದಕ್ಕೆ ಬಲಿಯಾಗಬಾರದೆಂದರೆ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸುವುದು ಅವಶ್ಯಕ ಎಂದು ಹೇಳಿದರು.

ಲಿಂಗಪೂಜೆ, ಅನುಭಾವಗಳೇ ಶರಣನ ನಿಜವಾದ ಸಂಭ್ರಮ. ಅಂಥ ಸಂಭ್ರಮ ಉಕ್ಕಿಸಲೆಂದೇ ಅಕ್ಕನವರ ಸಂಕಲ್ಪದಂತೆ ಪ್ರತಿ ವರ್ಷ ನವರಾತ್ರಿಗೆ ನವ ಚಿಂತನೆಗಳ ಮಾಲಿಕೆಯ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಮಗಾಗಿ ಪ್ರಾಣ ತ್ಯಾಗ ಮಾಡಿದ ಹರಳಯ್ಯ-ಮಧುವರಸ ಮೊದಲಾದ ಅಸಂಖ್ಯ ಶರಣರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಬಸವಾದಿ ಶರಣರ ತತ್ವಗಳಿಂದ ಮಾತ್ರ ಜಗತ್ತು ಮಾನವೀಯತೆಯಿಂದ ಬೆಳಗಲು ಸಾಧ್ಯ ಎಂದು ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಡಾ. ಶಿವಲಿಂಗ ಹೇಡೆ ತಿಳಿಸಿದರು.

ಮರಣವೇ ಮಹಾನವಮಿ ಎಂಬುದು ಶರಣರ ಮಹಾ ವಾಕ್ಯ. ತತ್ವ ಉಳಿಸಿ ಬೆಳೆಸಲು ಪ್ರಾಣ ತ್ಯಾಗಕ್ಕೂ ಹಿಂಜರಿಯಬಾರದೆಂಬುದೇ ಇದರ ಅರ್ಥ. ಬಸವ ಧರ್ಮ ಕೇವಲ ನುಡಿಯ ಧರ್ಮವಲ್ಲ. ನಡೆದು ನುಡಿವ ಧರ್ಮ ಎಂದು ಹೇಳಿದರು.

ಬಸವಣ್ಣನವರು ಬಿದ್ದವರನ್ನು ಎತ್ತಲೆಂದೇ ಕಲ್ಯಾಣ ಕ್ರಾಂತಿಗೈದರು. ಸರ್ವರ ಕಲ್ಯಾಣವೇ ಅವರ ಗುರಿಯಾಗಿತ್ತು ಎಂದು ತಿಳಿಸಿದರು.

ಲಿಂಗಾಯತ ಮಹಾ ಮಠದಿಂದ ಒಂಬತ್ತು ದಿನ ಒಂಬತ್ತು ವಿಷಯಗಳ ಉಪನ್ಯಾಸ ಏರ್ಪಡಿಸಿ ಮರಣವೇ ಮಹಾನವಮಿ ಹಾಗೂ ಕಲ್ಯಾಂತಿ ಕ್ರಾಂತಿ ವಿಜಯೋತ್ಸವ ಅಚರಿಸುತ್ತಿರುವುದು ಶ್ಲಾಘನೀಯ ಎಂದು ಉದ್ಘಾಟನೆ ನೆರವೇರಿಸಿದ ಡಾ. ಕಪಿಲ್ ಜಿ. ಪಾಟೀಲ ಹೇಳಿದರು.

ನಿವೃತ್ತ ಎಎಸ್‍ಐ ಮಾರುತಿ ಪಾಟೀಲ ಅಧ್ಯಕ್ಷತೆ, ನೀಲಮ್ಮನ ಬಳಗದ ಸಂಧ್ಯಾರಾಣಿ ಮುತ್ತಂಗೆ, ಶೋಭಾ ಡಿಗ್ಗೆ ಸಮ್ಮುಖ ವಹಿಸಿದ್ದರು. ಭಾಲ್ಕಿ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ಶರಣಪ್ಪ ರಾಜಭವನ, ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಶಾಂತಕುಮಾರ ಪನಸಾಲೆ, ಸಾಹಿತಿ ರಮೇಶ ಮಠಪತಿ ಇದ್ದರು.

ಸುಪ್ರೀತ್ ಸೋಮನಾಥ ಪತಂಗೆ ವಚನ ಪಠಣ, ಶ್ಯಾಮಲಾ ಎಲಿ ಹಾಗೂ ಶ್ರೀದೇವಿ ಮಠಪತಿ ವಚನ ಗಾಯನ ಮಾಡಿದರು. ಬಸವ ಚಿಕಲಿಂಗೆ ನಿರೂಪಿಸಿದರು. ಪ್ರವೀಣ್ ಬಿರಾದಾರ ವಂದಿಸಿದರು.