ಜಿಲ್ಲೆ

ಅದ್ಧೂರಿ ವೀರಭದ್ರೇಶ್ವರ ಜಯಂತಿ, ಕೇದಾರ ಶ್ರೀ ಅಡ್ಡ ಪಲ್ಲಕ್ಕಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವೀರಭದ್ರೇಶ್ವರ ಜಯಂತಿ ಹಾಗೂ ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.

ಪಂಚಮುಖಿ ಶಿವಾಲಯ-ಬಿರ್ಲಾ ಮಂದಿರದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ಹಾಗೂ ಅರ್ಚನೆ ಮಾಡುವುದರೊಂದಿಗೆ ಅಡ್ಡ ಪಲ್ಲಕ್ಕಿಗೆ ಚಾಲನೆ ನೀಡಲಾಯಿತು.

ಅಡ್ಡಪಲ್ಲಕ್ಕಿಯು ಅಲ್ಲಿಂದ 3 ಕಿ.ಮೀ. ಅಂತರದ ಪುರಾತನ ವಾಲ್ಮೀಕಿ ಮಂದಿರವನ್ನು ತಲುಪಿ ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಕಳಶ ಹೊತ್ತು ಸಾಗಿದರು. ವೀರಗಾಸೆ, ಡೊಳ್ಳು ಕುಣಿತ, ನಗಾರಿ ಮತ್ತಿತರ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಜಗದ್ಗುರುಗಳಿಗೆ ಜೈಕಾರದ ಘೋಷಣೆಗಳು ಮೊಳಗಿದವು.

ಮೆರವಣಿಗೆ ವಾಲ್ಮೀಕಿ ಮಂದಿರಕ್ಕೆ ಬಂದ ನಂತರ ಜಗದ್ಗುರುಗಳು ವಾಲ್ಮೀಕಿ ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಮಹಾ ಮಂಡಲೇಶ್ವರ ಕೃಷ್ಣಸಾ ವಿದ್ಯಾರ್ಥಿ ಅವರನ್ನು ಆಶೀರ್ವದಿಸಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ, ಮಾಜಿ ಶಾಸಕರೂ ಆದ ಉಪಾಧ್ಯಕ್ಷ ಮಲ್ಲಿಕಾರ್ಜುನ ಖೂಬಾ, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಮುಖಂಡ ಸತೀಶ್ ಹಿಂಭಾವಿಮಠ, ರಾಜ್ಯ ಅಧ್ಯಕ್ಷ ರವಿ ಬಿರಾದಾರ, ವೀರಶೈವ ಸಮಾಜದ ಹರಿಯಾಣ ಅಧ್ಯಕ್ಷ ಸೋಮವೀರ ಬೇನಿವಾಲ್, ಅಂತರರಾಷ್ಟ್ರೀಯ ಹಿಂದೂ ಸಂಘಟನೆಯ ಅಧ್ಯಕ್ಷ ಅರುಣ್ ಉಪಾಧ್ಯಾಯ, ನಾಂದೇಡ್‍ನ ಮಾಜಿ ಮಹಾ ಪೌರ ಕಿಶೋರ ಸ್ವಾಮಿ, ಪ್ರಮುಖರಾದ ದಿವ್ಯ ಹಾಗರಗಿ, ಅಲ್ಕಾ ಚೌಧರಿ, ಚಂದ್ರಶೇಖರ ಶಾಸ್ತ್ರಿ, ಬೀರೂರು ಶಿವಸ್ವಾಮಿ, ದ್ವಾರಕನಾಥ ಶಾಸ್ತ್ರಿ, ಪರಮೇಶ ಚಿಕ್ಕಮಠ, ಶಿವಶರಣ ಸಿ.ಎಂ., ವಿದ್ಯಾ ಗುಬ್ಬಿತೋಟದಪ್ಪ ಮತ್ತಿತರ ಮುಖಂಡರು ಹಾಗೂ ವಿವಿಧೆಡೆಯ ಅಪಾರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಅಡ್ಡ ಪಲ್ಲಕ್ಕಿ ನಂತರ ನಡೆದ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮವನ್ನು ಕೇಂದ್ರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವೀರಭದ್ರೇಶ್ವರ ಜಯಂತಿ ಹಾಗೂ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಹಮ್ಮಿಕೊಂಡಿರುವುದು ಸಂತಸದ ಸಂಗತಿ, ಇದು ಸನಾತನ ವೀರಶೈವ ಸಂಘಟನೆಗೆ ಪೂರಕವಾಗಲಿದೆ ಎಂದು ತಿಳಿಸಿದರು.

ಶಿವ ಭೋಲಾಶಂಕರ. ವೀರಭದ್ರನಿಗೆ ಜನ್ಮ ನೀಡಿ ದುಷ್ಟರನ್ನು ಸಂಹರಿಸಿದ್ದರು. ವೀರಭದ್ರ ಶಿವನ ಪ್ರತಿರೂಪ ಎಂದು ಹೇಳಿದರು.

ರಾಜ್ಯಸಭಾ ಸದಸ್ಯರೂ ಆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಅವರಿಗೆ ಕೇದಾರ ಜಗದ್ಗುರುಗಳು ಶ್ರೀ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.

ದೇಶದ ವಿವಿಧೆಡೆಯ ಶಿವಾಚಾರ್ಯರು, ಸಂತರು, ಗುರು ವಿರಕ್ತರು ಸಮ್ಮುಖ ವಹಿಸಿದ್ದರು. ರಾಜ್ಯಸಭಾ ಸದಸ್ಯ ಡಾ. ಅಜಿತ್ ಮಾಧವರಾವ್ ಗೋಪಚಡೆ ಮತ್ತಿತರರು ಇದ್ದರು.