ಬೀದರ್: ಸಾಮಾಜಿಕ-ಶೈಕ್ಷಣಿಕ ಜಾತಿ ಗಣತಿಯಲ್ಲಿ ಬ್ರಾಹ್ಮಣರು ಉಪ ಪಂಗಡಗಳನ್ನು ಬಿಟ್ಟು ಭಾರತೀಯ ಹಿಂದು ಬ್ರಾಹ್ಮಣ ಎಂದೇ ಬರೆಯುವಂತೆ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಮನವಿ ಮಾಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ನಡೆಸಲಿರುವ ಜಾತಿಗಣತಿಯಲ್ಲಿ ಮನೆ ಮನೆಗೆ ಭೇಟಿ ನೀಡುವ ಗಣತಿದಾರರು 60 ಪ್ರಶ್ನೆಗಳ ಚೀಟಿ ಆಧರಿಸಿ ಮಾಹಿತಿ ದಾಖಲಿಸಲಿದ್ದಾರೆ. ಹೀಗಾಗಿ ವಿಪ್ರರು ಯಾವುದೇ ಉಪಪಂಗಡ ನಮೂದಿಸದೆ ಭಾರತೀಯ ಹಿಂದು ಬ್ರಾಹ್ಮಣ ಎಂದು ಮಾತ್ರ ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಿಂದಿನ ಗಣತಿಯಲ್ಲಿ ಬ್ರಾಹ್ಮಣರ ಸಂಖ್ಯೆ 14 ಲಕ್ಷ ಆಗಿತ್ತು. ಆದರೆ ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮುದಾಯ ಹಿಂದುಳಿದ ಸ್ಥಿತಿ ಎದುರಿಸುತ್ತಿರುವುದರಿಂದ ವಾಸ್ತವ ಬಹಿರಂಗಗೊಳ್ಳಲು ಏಕೀಕೃತ ದಾಖಲೆ ಅಗತ್ಯವಾಗಿದೆ. ಸಮುದಾಯದ ಒಗ್ಗಟ್ಟೇ ನಮ್ಮ ಅಸ್ತಿತ್ವ, ಆತ್ಮಗೌರವ ಮತ್ತು ಹಕ್ಕುಗಳನ್ನು ಕಾಪಾಡುವ ಏಕೈಕ ಶಕ್ತಿ. ಮುಂದಿನ ತಲೆಮಾರಿನ ಉಜ್ವಲ ಭವಿಷ್ಯ ನಿರ್ಮಿಸಲು ಗಣತಿಯಲ್ಲಿ ಹಿಂದು ಬ್ರಾಹ್ಮಣ ಎಂದೇ ನಮೂದಿಸುವುದು ಜರೂರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.