ಜಿಲ್ಲೆ

ಮಾಸಿಕ ಸಂತೆಯಿಂದ ಆದಾಯ ಹೆಚ್ಚಳ

ರೇವಣಸಿದ್ದಪ್ಪ ಪಾಟೀಲ್

ಚಿಟಗುಪ್ಪ: ಮಾಸಿಕ ಸಂತೆ ಆಯೋಜನೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗುವ ಜತೆಗೆ ಆರ್ಥಿಕವಾಗಿ ಸದೃಢವಾಗಲು ಪೂರಕವಾಗಲಿದೆ ಎಂದು ಬೇಮಳಖೇಡ ಒಕ್ಕೂಟ ಅಧ್ಯಕ್ಷೆ ಯೋಗೀತಾ ರಾಜಕುಮಾರ ಹೇಳಿದರು.

ಬೇಮಳಖೇಡದಲ್ಲಿ ಗುರುವಾರ ತಾಲೂಕು ಪಂಚಾಯಿತಿಯ ಎನ್ಆರ್ಎಲ್ಎಂ ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘದ ಮಹಿಳೆಯರು ಸಿದ್ಧಪಡಿಸುವ ಉತ್ಪನ್ನಗಳಿಗೆ ಸಂತೆ ವೇದಿಕೆ ಕಲ್ಪಿಸಲಿದೆ ಎಂದರು. ಸಂಘಗಳ ಸದಸ್ಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಸಂಜೀವಿನಿ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಎನ್ಆರ್ಎಲ್ಎಂ ಕಾರ್ಯಕ್ರಮ ವ್ಯವಸ್ಥಾಪಕ ನಾಗಪ್ಪ ಕಂಬಾರಿ ಮಾತನಾಡಿ, ಸ್ವಸಹಾಯ ಸಂಘದವರು ಸಿದ್ಧಪಡಿಸುವ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿ ಅವರ ಉದ್ಯೋಗಕ್ಕೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಕಾರ್ಯದರ್ಶಿ ಸಿದ್ದಮ್ಮ ರಮೇಶ, ಅಂಬಿಕಾ ವೆಂಕಟರಾವ ಮಾತನಾಡಿದರು. ಸರಸ್ವತಿ ಶಿವರಾಜ ಸೇರಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಸಂಘಗಳ ಸದಸ್ಯರು, ಸ್ಥಳೀಯರು ಇದ್ದರು.