ಬೀದರ್: ಬಿಲ್ವಪತ್ರಿ ಸಸಿಯ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವ ಕುರಿತು ಬೀದರ್‍ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಹೊರ ತರಲಾದ ಕಿರು ಹೊತ್ತಿಗೆಯನ್ನು ನವದೆಹಲಿಯಲ್ಲಿ ಕೇಂದ್ರದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‍ಸಿಂಗ್ ಚೌಹಾಣ್ ಬುಧವಾರ ಬಿಡುಗಡೆ ಮಾಡಿದರು.
ಮಾತೆ ಕರುಣಾದೇವಿ ಅವರ ಹೆಸರಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಒಂದು ಲಕ್ಷ ಸಸಿ ನೆಡುವಿಕೆ ಹಾಗೂ ವಿತರಣೆ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಸಂಘಗಳ ಪರಿಸರ ಕಾಳಜಿ ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಸಿ ವಿತರಣೆ ಮಾಡಲಾಗುತ್ತಿದೆ. ವಿಶೇಷವಾಗಿ ಶ್ರಾವಣದಲ್ಲಿ ಬಿಲ್ವಪತ್ರಿ ಸಸಿಗಳನ್ನು ವಿತರಿಸಲಾಗಿದೆ ಎಂದು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.
ದೇವರಿಗೆ ಪ್ರಿಯವಾದ ಬಿಲ್ವಪತ್ರಿಗೆ ವಿಶೇಷ ಸ್ಥಾನ ಇದೆ. ಹೀಗಾಗಿ ಇದರ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವದ ಸಮಗ್ರ ಮಾಹಿತಿ ಒಳಗೊಂಡ ಆರು ಪುಟಗಳ ಕಿರು ಹೊತ್ತಿಗೆಯನ್ನು ಹೊರ ತರಲಾಗಿದೆ. ಅಭಿಯಾನದ ವೇಳೆ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಹೇಳಿದರು.