ಬೀದರ್: ಆನಂದ ಹಾಗೂ ಸ್ವಾಸ್ಥ್ಯಕ್ಕಾಗಿ ಎಲ್ಲರೂ ಆಟ ಆಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ವತಿಯಿಂದ ಇಲ್ಲಿಯ ಎನ್.ಎಫ್. ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬೀದರ್ ತಾಲ್ಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆಯೇ ಮುಖ್ಯ ಎಂದು ತಿಳಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮಾತನಾಡಿ, ದೈಹಿಕ ಹಾಗೂ ಹಾಗೂ ಮಾನಸಿಕ ವಿಕಾಸಕ್ಕಾಗಿ ಪಠ್ಯದ ಜತೆ ಕ್ರೀಡಾ ಚಟುವಟಿಕೆಗಳೂ ಅವಶ್ಯಕ. ಕ್ರೀಡಾಕೂಟಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಪ್ಪ ಗೌರಶೆಟ್ಟಿ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹಾಗೂ ಆತ್ಮವಿಶ್ವಾಸ ಮೂಡಿಸುತ್ತವೆ. ಕ್ರೀಡೆಗಳಲ್ಲಿ ಆರೋಗ್ಯದ ಗುಟ್ಟು ಅಡಗಿದೆ ಎಂದು ತಿಳಿಸಿದರು.
ಓಂಕಾಂತ ಸೂರ್ಯವಂಶಿ, ಡಾ. ವಿಜಯಕುಮಾರ ಪಾಟೀಲ, ವಿಜಯಕುಮಾರ ತೋರಣಕರ್, ಬಾಲಾಜಿ ವಾಡೇಕರ್, ಎಲಿಜಬೆತ್ ಸ್ವರೂಪರಾಣಿ, ರಾಜಶೇಖರ ಮಂಗಲಗಿ, ದೈಹಿಕ ಉಪನ್ಯಾಸಕರಾದ ಸಂಜಯ್ ಜೆಸ್ಸಿ, ಧನರಾಜ ಖೇಣಿ, ನಾಗನಾಥ ಬಿರಾದಾರ ಇದ್ದರು.
ತಹರೇನ್ ಪ್ರಾರ್ಥನೆ ಗೀತೆ ಹಾಡಿದರು. ಎಸ್.ಎಂ. ಐನಾಪುರ ನಿರೂಪಿಸಿದರು. ಬಸವರಾಜ ಹೆಗ್ಗೆ ವಂದಿಸಿದರು.