ಜಿಲ್ಲೆ

ಹೆಕ್ಟೇರ್ ಗೆ ರೂ.50 ಸಾವಿರ ಪರಿಹಾರ ಕೊಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ತಕ್ಷಣ ಹೆಕ್ಟೇರ್ ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಜೆಡಿಎಸ್ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಬೆಳೆ ಕಳೆದುಕೊಂಡಿದ್ದ ರೈತರಿಗೆ ಹೆಕ್ಟೇರ್ಗೆ 25 ಸಾವಿರ ರೂ. ಪರಿಹಾರ ನೀಡಿ ನೆರವಾಗಿದ್ದರು. ಈಗಿನ ರಾಜ್ಯ ಸರ್ಕಾರವೂ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ ಸೇರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಒಣಬೇಸಾಯ ಪ್ರದೇಶ ಹೆಚ್ಚಿರುವುದರಿಂದ ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನೇ ಅವಲಂಬಿಸಿದ್ದಾರೆ. ರೈತರ ಬಹುತೇಕ ಆರ್ಥಿಕ ಅಗತ್ಯವನ್ನು ಮುಂಗಾರು ಬೆಳೆಗಳೇ ಪೂರೈಸುತ್ತವೆ. ಆದರೆ ಈ ಸಲ ಅತಿಯಾದ ಮಳೆಯಿಂದಾಗಿ ಮುಂಗಾರಿನ ಬಹುತೇಕ ಎಲ್ಲ ಬೆಳೆಗಳು ಹಾಳಾಗಿವೆ. ಬಿತ್ತನೆ, ಸಾಗುವಳಿ ಸೇರಿ ಬೇರೆ ಬೇರೆ ಕಾರ್ಯಕ್ಕೆ ಸಾವಿರಾರು ರೂ. ಖರ್ಚು ಮಾಡಿದ್ದರೂ ಬೆಳೆ ಕೈಗೆ ಬಾರದೆ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ವಿಷಯದಲ್ಲಿ ಸರ್ಕಾರ ಕಾಲಹರಣ ಮಾಡದೆ ಸಾಧ್ಯವಾದಷ್ಟು ಬೇಗ ಹೆಕ್ಟೇರ್ ಗೆ 50 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಬೇಕು. ಬೆಳೆಹಾನಿ ಸಮೀಕ್ಷೆ ಹೆಸರಿನಲ್ಲಿ ವಿಳಂಬ ಮಾಡಬಾರದು. ಸಮೀಕ್ಷೆ ಪೂರ್ಣಗೊಂಡ ನಂತರ ಬೇಕಾದರೆ ಅಂತಿಮ ಪರಿಹಾರ ಕೊಡಲಿ ಎಂದು ಕೋರಿದ್ದಾರೆ.