ಬೀದರ್: ಜಾಗೃತಿಯಿಂದ ಮಾತ್ರ ಮಾರಕ ಏಡ್ಸ್ ನಿಯಂತ್ರಿಸಲು ಸಾಧ್ಯವಿದೆ ಎಂದು ಔರಾದ್ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಪಾಟೀಲ ಹೇಳಿದರು.
ಕಮಲನಗರ ತಾಲ್ಲೂಕಿನ ಠಾಣಾಕುಶನೂರು ಗ್ರಾಮದ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಏಡ್ಸ್ ಹಾಗೂ ಲೈಂಗಿಕ ರೋಗಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏಡ್ಸ್‍ಗೆ ಕಾರಣವಾಗುವ ಎಚ್‍ಐವಿ ವೈರಸ್ ಮನುಷ್ಯನ ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಸಿಫಿಲಿಸ್, ಗನೋರಿಯಾ, ಹೆಪಟೈಟಿಸ್ ರೋಗಗಳು ಕೂಡ ಲೈಂಗಿಕ ಸಂಪರ್ಕದಿಂದ ಹರಡುತ್ತವೆ ಎಂದು ತಿಳಿಸಿದರು.
ಸುರಕ್ಷಿತವಲ್ಲದ ಲೈಂಗಿಕ ಸಂಬಂಧ, ಸೋಂಕಿತ ಸೂಜಿ, ಸಿರಿಂಜ್ ಬಳಸುವುದು, ಪರೀಕ್ಷಿಸದ ರಕ್ತ ಪಡೆಯುವುದು ಮೊದಲಾದವುಗಳು ಏಡ್ಸ್‍ಗೆ ಕಾರಣವಾಗುತ್ತವೆ ಎಂದು ಹೇಳಿದರು.
ಸಾಮಾನ್ಯವಾಗಿ ಕೈಕುಲುಕುವುದು, ಊಟ ಹಂಚಿಕೊಳ್ಳುವುದು, ಒಟ್ಟಿಗೆ ಕುಳಿತುಕೊಳ್ಳುವುದರಿಂದ ರೋಗ ಹರಡುವುದಿಲ್ಲ ಎಂದು ತಿಳಿಸಿದರು.
ಏಡ್ಸ್ ಹಾಗೂ ಇತರ ಲೈಂಗಿಕ ರೋಗಗಳ ತಡೆಗೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಎಲ್ಲರೂ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ರಾಜಶೇಖರ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಸಂಗಮೇಶ ಆಣದೂರೆ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ರೇವಣಪ್ಪ ವಾಕಡೆ, ಇಇಇ ಸಂಯೋಜಕ ಸುನೀಲಕುಮಾರ ಮಡಿವಾಳ, ಉಪನ್ಯಾಸಕರಾದ ಜಯಶ್ರೀ ಜೀರ್ಗೆ, ಅರ್ಚನಾ ಸಿಂಧೆ, ವಿಶ್ವನಾಥ ಶಾಸ್ತ್ರಿ, ಮಲ್ಲಿಕಾರ್ಜುನ ಸೀಗಿ, ಸಂಜಯಕುಮಾರ ಭೋಸ್ಲೆ, ಅಶೋಕ ಪಾಂಚಾಳ್ ಇದ್ದರು.