ಜಿಲ್ಲೆ

ಸರ್ಕಾರದ ಮೇಲೆ ಒತ್ತಡಕ್ಕೆ ನಿರ್ಧಾರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳ ಶೀಘ್ರ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಧರಿಸಿದೆ.

ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಂಘದ ರಾಜ್ಯಮಟ್ಟದ ವಿಷಯ ಸಭೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಈ ವಿಷಯ ತಿಳಿಸಿದರು.

ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಅರಣ್ಯ ಸಚಿವರ ಜತೆಗೆ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸರ್ಕಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ಸೂಚಿಸಿದೆ. ಈ ದಿಸೆಯಲ್ಲಿ ತ್ವರಿತ ಆದೇಶಕ್ಕಾಗಿ ಆಡಳಿತದ ಗಮನ ಸೆಳೆಯಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಸೆ. 17 ರಂದು ಕಲಬುರಗಿಯಲ್ಲಿ ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

1995 ರ ನಂತರ ಆರಂಭವಾದ ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಕೂಡಲೇ ಆದೇಶ ಹೊರಡಿಸದಿದ್ದರೆ ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಸಿಬ್ಬಂದಿಯೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

ಸಂಘವು ಈ ಬಾರಿ ನ್ಯಾಯಕ್ಕಾಗಿ ‘ಮಾಡು ಇಲ್ಲವೇ ಮಡಿ’ ಮಾದರಿಯಲ್ಲಿ ಹೋರಾಟಕ್ಕೆ ಅಣಿಯಾಗಲಿದೆ. ಇದಕ್ಕಾಗಿ ರಾಜ್ಯದಾದ್ಯಂತ ಸಂಘಟನೆ ಸಂಚರಿಸಿ ಸಂಘಟನೆ ಬಲಪಡಿಸಲಿದೆ ಎಂದು ಹೇಳಿದರು.

1995 ರ ನಂತರ ಆರಂಭಿಸಲಾದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡ ಮಕ್ಕಳಿಗೆ ಆಸರೆಯಾಗಿದ್ದ ಆರ್‍ಟಿಇ ಖಾಸಗಿ ಶಾಲೆಗಳಲ್ಲಿ ಮರು ಜಾರಿಗೊಳಿಸಬೇಕು. ಅನುದಾನಿತ ಶಾಲೆ, ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಮಾಡಬೇಕು. ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜು ಕಟ್ಟಡಗಳಿಗೆ ಕರ ವಿನಾಯಿತಿ ನೀಡಬೇಕು. ಉಚಿತ ವಿದ್ಯುತ್ ಒದಗಿಸಬೇಕು. ಕನ್ನಡ ಶಾಲೆ ಬಂದ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ ಹೆಸರಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯುವುದನ್ನು ಕೈಬಿಡಬೇಕು. ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳ ನವೀಕರಣ ಪ್ರಕ್ರಿಯೆ ಸರಳೀಕರಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜುಗಳಿಗೆ ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಅನ್ವಯ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಪ್ರಮುಖ ಸಂಘದ ಪ್ರಮುಖ  ಬೇಡಿಕೆಗಳಾಗಿವೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣಕುಮಾರ ಶಹಾಪುರ ಹಾಗೂ ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಅಧ್ಯಕ್ಷ ಸಂದೀಪ್ ಬೂದಿಹಾಳ್ ಸಂಘದ ಹೋರಾಟವನ್ನು ಬೆಂಬಲಿಸುವುದಾಗಿ ಪ್ರಕಟಿಸಿದರು.

ಸಂಘದ ರಾಜ್ಯ ಸಂಚಾಲಕ ಜೆ.ಸಿ. ಶಿವಪ್ಪ, ಉಪಾಧ್ಯಕ್ಷರಾದ ಎಂ. ಮೌಲಾಲಿ, ಡಿ.ಬಿ. ನದಾಫ್, ನಂಜುಂಡಸ್ವಾಮಿ ಮೈಸೂರು, ಕೃಷ್ಣಮೂರ್ತಿ ಬೆಂಗಳೂರು, ಕೃಷ್ಣಪ್ಪ ಕೋಲಾರ್, ಐ.ಎಸ್. ಸ್ವರ್ಗಿನಮಠ ಬೆಳಗಾವಿ, ಕಾರ್ಯದರ್ಶಿ ಕೆ. ಗುರುನಾಥ ರೆಡ್ಡಿ, ಹುಬ್ಬಳ್ಳಿ ವಿಭಾಗ ಪ್ರಮುಖ ಅನಿಲ್ ಜಾಧವ್, ಕಲಬುರ್ಗಿ ವಿಭಾಗ ಪ್ರಮುಖರಾದ ರಾಜೇಂದ್ರ ಯರನಾಳೆ, ಮಹಾಲಿಂಗಗೌಡ, ಮಹಿಳಾ ಪ್ರಮುಖ ಜಿ.ಎಸ್. ದೇಸಾಯಿ, ಬೀದರ್‍ನ ಮಾಣಿಕಪ್ಪ ಗೋರನಾಳೆ ಮತ್ತಿತರರು ಇದ್ದರು.