ಬೀದರ್: ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ವತಿಯಿಂದ ನಗರದ ಮೈಲೂರು ರಸ್ತೆಯಲ್ಲಿ ಇರುವ ಮೌನೇಶ್ವರ ಮಂದಿರದ ಆವರಣದಲ್ಲಿ ಸೆ.7ರಂದು ಬೆಳಿಗ್ಗೆ 10ಕ್ಕೆ ರಂಗೋಲಿ ಬಿಡಿಸುವ ಹಾಗೂ ಚಿತ್ರ ರಚನೆ ಸ್ಪರ್ಧೆ ನಡೆಯಲಿವೆ.
ವಿಶ್ವಕರ್ಮ ಜಯಂತಿ ಅಂಗವಾಗಿ ಸಂಘಟಿಸಲಾದ ಸ್ಪರ್ಧೆಗಳಲ್ಲಿ 10 ವರ್ಷ ಮೇಲ್ಪಟ್ಟ ವಿಶ್ವಕರ್ಮ ಸಮಾಜದ ಮಕ್ಕಳು ಹಾಗೂ ಮಹಿಳೆಯರು ಪಾಲ್ಗೊಳ್ಳಬಹುದು ಎಂದು ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಂಚಾಳ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಸೆ. 17 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜರುಗಲಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಬಿ.ಕೆ. ಬಡಿಗೇರ್, ಮಹೇಶ್ವರಿ ಸುರೇಶ ಪಂಚಾಳ ಹಾಗೂ ಸುರೇಶ ವಿಶ್ವಕರ್ಮ ಕಣಜಿ ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿರುವರು. ಸ್ಪರ್ಧೆಯಲ್ಲಿ ಭಾಗವಹಿಸುವವರು ಅಗತ್ಯ ಸಾಮಗ್ರಿಗಳೊಂದಿಗೆ ಬರಬೇಕು ಎಂದು ಹೇಳಿದ್ದಾರೆ.
ವಿಶ್ವಕರ್ಮ ಜಯಂತಿ ನಿಮಿತ್ತ ವಾಸು ಆಸ್ಪತ್ರೆ ವತಿಯಿಂದ ಮೌನೇಶ್ವರ ಮಂದಿರದಲ್ಲಿ ಭಾನುವಾರ (ಸೆ.7) ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಜರುಗಲಿದೆ. ಡಾ. ಅರುಣಕುಮಾರ ವಿಶ್ವಕರ್ಮ ಹಾಗೂ ತಂಡದವರು ಶಿಬಿರ ನಡೆಸಿಕೊಡಲಿದ್ದಾರೆ. ಸಮಾಜದವರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.