ಬೀದರ್: ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹಕಾರ ನೀಡಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಕಾರ್ಖಾನೆ ಅಧ್ಯಕ್ಷರೂ ಆದ ಮಾಜಿ ಶಾಸಕ ಸುಭಾಷ ಕಲ್ಲೂರ ಎಚ್ಚರಿಸಿದರು.
ಸಾಲದ ನೆಪವೊಡ್ಡಿ ಬಿಎಸ್ಎಸ್ಕೆ ಯಾವ ಕಾರಣಕ್ಕೂ ಮಾರಾಟ ಮಾಡಲು ಬಿಡುವುದಿಲ್ಲ. ಈ ಎಲ್ಲ ವಿಷಯಗಳು ರೈತರ ಗಮನಕ್ಕೆ ತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರು ಕಾರ್ಖಾನೆ ಆರಂಭಕ್ಕೆ ಸಹಕಾರ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಖಾನೆ 173.35 ಎಕರೆ ಜಮೀನು ಹೊಂದಿದೆ. ಡಿಸಿಸಿ ಬ್ಯಾಂಕ್ ನವರಿಗೆ ಏಳೆಂಟು ಬಾರಿ ಪತ್ರ ಬರೆದು ಕಾರ್ಖಾನೆ ಸಾಲದ ಬಡ್ಡಿ ಮನ್ನಾ ಮಾಡುವಂತೆ ಕೋರಲಾಗಿದೆ. ಲೀಜ್ ನಿಂದ ಬರುವ ಹಣದಿಂದ ಸಾಲ ಪಾವತಿ ಮಾಡುವುದಾಗಿಯೂ ವಿನಂತಿ ಮಾಡಿಕೊಳ್ಳಲಾಗಿದೆ. ಆದರೆ ಚುನಾಯಿತ ಆಡಳಿತ ಮಂಡಳಿ ಗಮನಕ್ಕೂ ತರದೆ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ 2024ರ ಆ.2ರಂದು ಕಾರ್ಖಾನೆ ಜಾಗ ವಶಕ್ಕೆ ಪಡೆದು ಡಿ.16ರಂದು 184 ಕೋಟಿ ರೂ.ಗೆ ಹರಾಜು ಮಾಡಿದ್ದಾರೆ ಎಂದರು.
ಈ ಹಿಂದೆ ಕಾರ್ಖಾನೆ ಲೀಜ್ ಗೆ ಪಡೆಯಲು ಇಬ್ಬರು ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಮೊದಲಿಗೆ 40 ಕೋಟಿ ರೂ. ಪಾವತಿಸಿ ನಂತರ ಪ್ರತಿವರ್ಷ 8 ಕೋಟಿ ರೂ. ನೀಡುವುದಾಗಿ ಹೇಳಿದ್ದರೂ ಉದ್ದೇಶಪೂರ್ವಕವಾಗಿ ಸಚಿವರು ಮುಂದೂಡುತ್ತಿರುವ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದರು.
ಕಾರ್ಖಾನೆಯಲ್ಲಿ ಎಥೆನಾಲ್ ಮತ್ತು ಕೋಜನ್ ಘಟಕ ಸ್ಥಾಪಿಸಲು 550 ಕೋಟಿ ರೂ. ಸಾಲಕ್ಕಾಗಿ ಸಕ್ಕರೆ ಸಚಿವರಿಗೆ ಕೋರಲಾಗಿತ್ತು. ಅವರ ಶಿಫಾರಸಿನ ಮೇರೆಗೆ ಸಾಲ ಮಂಜೂರು ಮಾಡಿ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಈ ಸಾಲವನ್ನು ಕರ್ನಾಟಕ ಸರ್ಕಾರ ಪಡೆದು ಕಾರ್ಖಾನೆಗೆ ಪಾವತಿಸುತ್ತದೆ. ಈ ಪತ್ರವನ್ನು ಸಚಿವ ಖಂಡ್ರೆ ಅವರಿಗೆ ನೀಡಿ ಸಾಲವನ್ನು ಸರ್ಕಾರದಿಂದ ಪಡೆದು ಕಾರ್ಖಾನೆಗೆ ವರ್ಗಾಯಿಸುವಂತೆ ಕೋರಿದ್ದೇವೆ. ಸಿಎಂ ಭೇಟಿಯಾಗಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಖಂಡ್ರೆ ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಎಸ್ಎಸ್ಕೆ ವಿಷಯದಲ್ಲಿ ಸಚಿವ ಈಶ್ವರ ಖಂಡ್ರೆ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಖಾನೆ ಹಾಗೂ ನನಗೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳುವ ಖಂಡ್ರೆ ಅವರು ಅದೇ ಕಾರ್ಖಾನೆ ಆರಂಭಕ್ಕೆ ಮೀನಮೇಷ ಎಣಿಸುತ್ತಿರುವುದು ಬೇಸರ ತಂದಿದೆ. ಕಾರ್ಖಾನೆಯನ್ನು ಲೀಜ್ ಗೆ ಕೊಡಬೇಕು ಇಲ್ಲವೇ ಅನುದಾನ ನೀಡಬೇಕು ಎಂದರು.
ಕಾರ್ಖಾನೆ ಉಪಾಧ್ಯಕ್ಷ ವಿಶ್ವನಾಥ ಪಾಟೀಲ್ ಮಾಡಗೂಳ, ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ್ ಚಿಟಗುಪ್ಪ, ಬಕ್ಕಪ್ಪ ಬಸರಡ್ಡಿ, ಅಪ್ಪಾರಾವ ಡಾಕುಳಗಿ, ರಾಜಪ್ಪ ಶೇರಿಕಾರ ಇದ್ದರು.