ಜಿಲ್ಲೆ

200ಕ್ಕೂ ಹೆಚ್ಚು ಪಾಸ್‍ಪೋರ್ಟ್ ಆಕಾಂಕ್ಷಿಗಳು ಭಾಗಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಂಚೆ ಇಲಾಖೆ ಹಾಗೂ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ವತಿಯಿಂದ ಇಲ್ಲಿಯ ಶಾಹೀನ್‍ನಗರದ ಅಬ್ದುರ್ ರಹಮಾನ್ ಮಲ್ಟಿಪರ್ಪೋಸ್ ಹಾಲ್‍ನಲ್ಲಿ ಶನಿವಾರ ನಡೆದ ಪಾಸ್‍ಪೋರ್ಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೇಳದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು  ಪಾಸ್‍ಪೋರ್ಟ್ ಆಕಾಂಕ್ಷಿಗಳು ಭಾಗಿಯಾದರು.

ಅಂಕಪಟ್ಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಸರಿಯಾದ ದಾಖಲೆ ಇದ್ದ 100 ಜನರಿಗೆ ಒಂದು ವಾರದಲ್ಲಿ ಆನ್‍ಲೈನ್ ಸೇವೆ ಒದಗಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ಈ ಪೈಕಿ 46 ಜನರಿಗೆ ಸ್ಥಳದಲ್ಲೇ ಅಪಾಯಿಂಟ್‍ಮೆಂಟ್ ಕೊಡಿಸಲಾಯಿತು.

ಉಳಿದ 100ಕ್ಕೂ ಹೆಚ್ಚು ಜನರಿಗೆ ಯಾವ ದಾಖಲೆಯನ್ನು ಯಾವ ರೀತಿ ಸರಿಪಡಿಸಬೇಕು ಎನ್ನುವ ಮಾಹಿತಿ ನೀಡಲಾಯಿತು.

ಇದಕ್ಕೂ ಮುನ್ನ ಮೇಳಕ್ಕೆ ಚಾಲನೆ ನೀಡಿದ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಪಾಸ್‍ಪೋರ್ಟ್ ಪಡೆಯುವುದನ್ನು ಸುಲಭವಾಗಿಸಲು ಮೇಳ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧೆಡೆಯ ಜನ ದಾಖಲೆಗಳೊಂದಿಗೆ ಬಂದು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ತಿಳಿಸಿದರು.