ಜಿಲ್ಲೆ

ದೇವರ ಕೃಪೆಗೆ ಸತ್ಯದ ಮಾರ್ಗದಲ್ಲಿ ನಡೆಯಿರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ದೇವರ ಕೃಪೆಗೆ ಪಾತ್ರರಾಗಲು ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂದು ಬೆಂಗಳೂರಿನ ವಿಕ್ಟೋರಿ ಇಂಟರ್‍ನ್ಯಾಷನಲ್ ಎ.ಜಿ. ಚರ್ಚ್‍ನ ರೆವರೆಂಡ್ ಡಾ. ರವಿಮಣಿ ಹೇಳಿದರು.

ಕಿಂಗ್ ಆಫ್ ಹೆವನ್ ಇಂಟರ್‍ನ್ಯಾಷನಲ್ ಮಿನಿಸ್ಟ್ರೀಸ್ ಬೀದರ್ ಸಭೆಯ ಎಂಟನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿಯ ಜಹೀರಾಬಾದ್ ರಸ್ತೆಯಲ್ಲಿನ ಬಿದ್ರಿ ವೃತ್ತ ಬಳಿಯ ಪಟೇಲ್ ಫಂಕ್ಷನ್ ಹಾಲ್‍ನಲ್ಲಿ ಏರ್ಪಡಿಸಿದ್ದ ಪ್ರಾರ್ಥನಾ ಕೂಟದಲ್ಲಿ ಅವರು ಮುಖ್ಯ ಸಂದೇಶ ನೀಡಿದರು.

ಯಾರು ಏನಾಗಬೇಕು ಎನ್ನುವುದನ್ನು ದೇವರು ಮೊದಲೇ ನಿರ್ಧಸಿರುತ್ತಾನೆ. ದೇವರು ವಹಿಸಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸಬೇಕು. ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಮಾತನಾಡಿ, ಕ್ರೈಸ್ತ ಸಮುದಾಯವು ಶಾಂತಿಪ್ರಿಯವಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ದೇಶಕ್ಕೆ ಸಮುದಾಯದ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ಸಮುದಾಯದವರು ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಕಲಬುರಗಿಯ ರೆವರೆಂಡ್ ಶಿರೋಮಣಿ ಆರಾಧನೆ ನಡೆಸಿಕೊಟ್ಟರು. ಕಾರ್ಯಕ್ರಮದ ರೂವಾರಿ ರೆವರೆಂಡ್ ಮನೋಜ್ ಪೌಲ್, ಪಾಸ್ಟರ್ ಸಿ. ಮನೋಹರ, ಪಾಸ್ಟರ್ ಚಂದ್ರಕಾಂತ, ಪಾಸ್ಟರ್ ಪಂಡಿತ, ಪಾಸ್ಟರ್ ಅನಿಲಕುಮಾರ, ಪಾಸ್ಟರ್ ಪ್ರಕಾಶ, ಪಾಸ್ಟರ್ ಅನಿಲ್ ಸೋನೆ ಮತ್ತಿತರರು ಇದ್ದರು. ನೂರಾರು ಜನ ಪಾಲ್ಗೊಂಡಿದ್ದರು.