ಜಿಲ್ಲೆ

ಹನುಮಾನ ಮಂದಿರಕ್ಕೆ ಸಂಗೀತ ಪರಿಕರ ಕೊಡುಗೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದ ಹನುಮಾನ ಮಂದಿರಕ್ಕೆ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಸಂಗೀತ ಪರಿಕರ ಕೊಡುಗೆಯಾಗಿ ನೀಡಿದ್ದಾರೆ.

ಹಾರ್ಮೋನಿಯಂ, ತಬಲಾ, ಡೋಲಕ್ ಹಾಗೂ ಇತರ ಸಂಗೀತ ಸಾಮಗ್ರಿಗಳನ್ನು ಮಂದಿರದ ಪ್ರಮುಖರಿಗೆ ಹಸ್ತಾಂತರಿಸಿದರು.

ಮಂದಿರದಲ್ಲಿ ನಡೆಯುವ ಭಜನೆ ಸೇರಿದಂತೆ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲು ಸಂಗೀತ ಪರಿಕರ ಕೊಡುಗೆಯಾಗಿ ನೀಡಲಾಗಿದೆ ಎಂದು ಅವರು ಹೇಳಿದರು.

ಶ್ರಾವಣ ಹಿಂದೂಗಳಿಗೆ ಅತ್ಯಂತ ಪವಿತ್ರವಾದದ್ದು. ಶ್ರಾವಣದಲ್ಲಿ ದೇಗುಲ, ಮನೆಗಳಲ್ಲಿ ಲಕ್ಷ ಬಿಲ್ವಾರ್ಚನೆ, ರುದ್ರಾಭಿಷೇಕ, ವಿಶೇಷ ಪೂಜೆ, ಧ್ಯಾನ, ಜಪ, ಸಂಗೀತ ಸೇವೆಗಳು ನೆರವೇರುತ್ತವೆ ಎಂದು ತಿಳಿಸಿದರು.

ಭಜನೆ ಹಾಗೂ ಇತರ ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುವ ಜತೆಗೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಆಧ್ಯಾತ್ಮ ಹಾಗೂ ಭಕ್ತಿ ಮಾರ್ಗಕ್ಕೆ ಸಮರ್ಪಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ನೌಬಾದ್-ಗೋರಟಾ-ಬೇಮಳಖೇಡ ಮಠದ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ಶ್ರಾವಣದಲ್ಲಿ ಮಾಡುವ ದಾನ, ಧರ್ಮದ ಕಾರ್ಯಗಳಿಗೆ ನೂರು ಪಟ್ಟು ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಹನುಮಾನ ಮಂದಿರಕ್ಕೆ ಸಂಗೀತ ಪರಿಕರ ಕೊಡುಗೆಯಾಗಿ ನೀಡಿದ ಶಿವಯ್ಯ ಸ್ವಾಮಿ ಅವರ ಕಾರ್ಯ ಶ್ಲಾಘನೀಯ. ಅವರು ಕಲೆ, ಸಂಸ್ಕøತಿ, ಸನಾತನ ಧರ್ಮದ ರಕ್ಷಣೆ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಇದೇ ಸಂದರ್ಭದಲ್ಲಿ ಭಕ್ತರಿಗೆ ಬಿಲ್ವಪತ್ರಿ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಪ್ರಮುಖರಾದ ಸಂಜೀವಕುಮಾರ ಸ್ವಾಮಿ, ರೇವಣಸಿದ್ದಯ್ಯ ಮಠಪತಿ, ಸಂಗಪ್ಪ ಸೊಶೆಟ್ಟಿ, ಕಾಶಣ್ಣ ಹೂಗಾರ, ಮಲ್ಲಿಕಾರ್ಜುನ ಸಜ್ಜನಶೆಟ್ಟಿ, ಸದಾನಂದ ಕಂಬಾರ್, ಬಸವರಾಜ ಬಡಿಗೇರ, ಜಗನ್ನಾಥ, ಕುಪೇಂದ್ರಪ್ಪ, ಶೇಖರ ಮತ್ತಿತರರು ಉಪಸ್ಥಿತರಿದ್ದರು.