ಬೀದರ್: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್‍ಶಿಪ್‍ನ ವಿವಿಧ ವಿಭಾಗಗಳಲ್ಲಿ ನಗರದ ಗ್ಲೋಬಲ್ ಸೈನಿಕ ಅಕಾಡೆಮಿಯ ಮಕ್ಕಳು 14 ಪದಕಗಳನ್ನು ಜಯಿಸಿ ಸಾಧನೆ ಮಾಡಿದ್ದಾರೆ.
ನಾಲ್ಕು ವಿದ್ಯಾರ್ಥಿಗಳು 14 ಪದಕಗಳನ್ನು ಬಾಚಿಕೊಂಡಿದ್ದು, ಇವರಲ್ಲಿ ಅನ್ವಿ 2 ಚಿನ್ನ, 2 ಬೆಳ್ಳಿ, 1 ಕಂಚು, ಅನುಷ್ಕಾ 2 ಚಿನ್ನ, 2 ಬೆಳ್ಳಿ, ನಿಶಾ 2 ಚಿನ್ನ, 2 ಬೆಳ್ಳಿ ಹಾಗೂ ಇಶಾ 1 ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರಬೇಕು ಎನ್ನುವುದು ಅಕಾಡೆಮಿ ಕನಸಾಗಿತ್ತು. ಅದು ಈಗ ಸಾಕಾರವಾಗಿದೆ. ಮಕ್ಕಳ ಸಾಧನೆ ಹೆಮ್ಮೆ ಉಂಟು ಮಾಡಿದೆ ಅಕಾಡೆಮಿಯ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಹೇಳಿದ್ದಾರೆ.
ತರಬೇತುದಾರ ಕ್ಯಾಪ್ಟನ್ ಪಾಲಂಗಪ್ಪ, ಪ್ರಾಚಾರ್ಯೆ ಸಮೋದ್ ಮೋಹನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾರಂಜಿ ಸ್ವಾಮಿ, ಮುಖ್ಯಶಿಕ್ಷಕಿ ಜ್ಯೋತಿ ರಾಗ, ಶಿಕ್ಷಕ ಸುನೀಲ್ ಅವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಅದ್ದೂರಿ ಸ್ವಾಗತ: ಪದಕ ಗೆದ್ದು ರೈಲು ಮೂಲಕ ನಗರದ ರೈಲು ನಿಲ್ದಾಣಕ್ಕೆ ಬಂದ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಶರಣಪ್ಪ ಸಿಕೇನಪುರ, ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಡಾ. ರಘು ಕೃಷ್ಣಮೂರ್ತಿ, ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಅಧ್ಯಕ್ಷ ರಾಜೇಂದ್ರ ಮಣಗೆರೆ, ಗಣಪತಿ ಸೋಲಪುರ, ಸಂತೋಷಕುಮಾರ ಮಂಗಳೂರೆ ಮತ್ತಿತರರು ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ನಂತರ ಅಲಂಕೃತ ರಥದಲ್ಲಿ ರೈಲು ನಿಲ್ದಾಣದಿಂದ ಅಕಾಡೆಮಿ ವರೆಗೆ ಮಕ್ಕಳ ಮೆರವಣಿಗೆ ನಡೆಯಿತು.