ಬೀದರ್: ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಬೇಕು ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಮಹೇಶ ಮಾಶೆಟ್ಟಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಎಂ.ಎ. ಅರ್ಥಶಾಸ್ತ್ರ, ಎಂ. ಕಾಂ, ಎಂ.ಎಸ್ಸಿ ಗಣಿತಶಾಸ್ತ್ರ ವಿದ್ಯಾರ್ಥಿನಿಯರ ಬೀಳ್ಕೊಡುಗೆ, ವೃತ್ತಿ ಸಮಾಲೋಚನೆ ಹಾಗೂ ಮಾರ್ಗದರ್ಶನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಛಲ, ಜಾಣ್ಮೆ ಹಾಗೂ ಕಠಿಣ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯವಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಸಿಂಧನೂರು ಸ್ನಾತಕೋತ್ತರ ಕೇಂದ್ರದ ಸಂಯೋಜಕ ಡಾ. ಕೆ.ಪಿ. ಸುರೇಶ ಮಾತನಾಡಿ, ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡುವುದು ಹಾಗೂ ಸ್ವಾವಲಂಬಿ ಆಗಿಸುವುದು ವಿಶ್ವವಿದ್ಯಾಲಯದ ಧ್ಯೇಯವಾಗಿದೆ ಎಂದು ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಭಿವೃದ್ಧಿ ಅಧಿಕಾರಿ ಆರ್.ಜಿ. ಮಠಪತಿ ಮಾತನಾಡಿ, ಸ್ನಾತಕೋತ್ತರ ಶಿಕ್ಷಣ ಪೂರೈಸಿದವರು ಯಾವುದಾದರೂ ಹುದ್ದೆ ಪಡೆಯುವವರೆಗೆ ವಿರಮಿಸಬಾರದು ಎಂದು ತಿಳಿಸಿದರು.
ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ. ಗಂಗಶೆಟ್ಟಿ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ಉಜ್ವಲ ಬದುಕು ಕಟ್ಟಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಅಶ್ವಿನಿ, ವರ್ಷ, ರಾಧಿಕಾ ಹಾಗೂ ಅನ್ನಪೂರ್ಣ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಮುಖರಾದ ಪ್ರಭಾಕರ ಗಂಗಶೆಟ್ಟಿ, ಸಂಜೀವ ಕುಲಕರ್ಣಿ, ಉಪನ್ಯಾಸಕರಾದ ಈಶ್ವರ ರೆಡ್ಡಿ, ಡಾ. ಪಂಡಿತ ಗಂಗಶೆಟ್ಟಿ, ಡಾ. ನಾಗೇಂದ್ರಪ್ಪ, ಡಾ. ಸಂಗಪ್ಪ ತೌಡಿ, ರವಿ, ಡಾ. ಅನ್ನಪೂರ್ಣ, ಶ್ರೀಲತಾ, ಪ್ರೇಮಲತಾ, ರೇಣುಕಾ, ಅರ್ಚನಾ, ಪ್ರಿಯಾಂಕ, ಸಿಬ್ಬಂದಿ ಶಂಕರ, ಮಲ್ಲಿಕಾರ್ಜುನ, ಮಹೇಶ, ಲಕ್ಷ್ಮಿ ಇದ್ದರು. ಪ್ರಿಯಂಕಾ ನಿರೂಪಿಸಿದರು. ಕೋಮಲ್ ಸ್ವಾಗತಿಸಿದರು. ಪುಷ್ಪಾ ವಂದಿಸಿದರು.