ಬೀದರ್: ಋಷಿಕೇಶ ಶಿಕ್ಷಣ ಸಂಸ್ಥೆಯ ಸಂಚಾಲಿತ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಗುರು ವಂದನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದ ಪೂಜೆ ಮಾಡಿದರು.
ಪಾಲಕರ ಪಾದಕ್ಕೆ ವಿಭೂತಿ, ಕುಂಕುಮ ಹಚ್ಚಿ, ಆರತಿ ಬೆಳಗಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು. ಗುರುಗಳ ಪಾದಕ್ಕೂ ಪೂಜೆ ಸಲ್ಲಿಸಿ ಗೌರವಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ಡಾ. ಪಲ್ಲವಿ ಪಾಟೀಲ ಮಾತನಾಡಿ, ಶಿಷ್ಯನಿಗೆ ಸಂಸ್ಕಾರ ಕೊಟ್ಟು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವವನೇ ನಿಜವಾದ ಗುರು ಎಂದು ಹೇಳಿದರು.
ವಿದ್ಯಾರ್ಥಿಗಳು ಸದಾ ಕಾಲ ಗುರು, ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.
ಭಾರತೀಯ ಶಿಕ್ಷಣ ಮಂಡಳ ಕರ್ನಾಟಕ ಉತ್ತರ ಪ್ರಾಂತ ಮಹಿಳಾ ಗತಿವಿಧಿ ಪ್ರಮುಖ ಪ್ರತಿಭಾ ಚಾಮಾ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ಗುರುವಿನ ಕೃಪೆ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿ ಎಂತಹ ಗುರಿಯನ್ನಾದರೂ ತಲುಪಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಮಂಡಳದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷಕುಮಾರ ಮಂಗಳೂರೆ ತಿಳಿಸಿದರು.
ಮುಖಂಡ ನಾಗರಾಜ ಕರ್ಪೂರ ಮಾತನಾಡಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು. ಅಲ್ಕಾವತಿ ಹೊಸದೊಡ್ಡೆ ನಿರೂಪಿಸಿದರು. ನೀಲಮ್ಮ ಗಜಲೆ ಸ್ವಾಗತಿಸಿದರು. ಜ್ಯೋತಿ ಸಂಗೋಳಗಿ ವಂದಿಸಿದರು.
ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಭಾರತೀಯ ಶಿಕ್ಷಣ ಮಂಡಳದ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.