ಜಿಲ್ಲೆ

ಭಾರತ ವಿಶ್ವಗುರು ಆಗಲು ಕೊಡುಗೆ ನೀಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: 2047 ರ ವೇಳೆಗೆ ಭಾರತವನ್ನು ವಿಕಸಿತ ಹಾಗೂ ವಿಶ್ವಗುರು ಆಗಿಸಲು ಯುವಕರು ಕೊಡುಗೆ ನೀಡಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಫ್ಲ್ಯಾಗ್‍ಶಿಪ್ ಯೋಜನೆ ಹಾಗೂ ಕುಶಲ್ ಸೇ ಸಮೃದ್ಧಿ ಔರ್ ರೋಜಗಾರ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಉದ್ಯೋಗಕ್ಕಾಗಿ ಅಲೆದಾಟ ನಡೆಸದೆ ಉದ್ಯೋಗದಾತರಾಗಬೇಕು. ನವ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಈಗಿನ ಡಿಜಿಟಲ್ ಯುಗದಲ್ಲಿ ಕೌಶಲಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ಯುವಕರು ಏನಾದರೊಂದು ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕೌಶಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪಿಎಂಕೆವಿವೈ, ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಮುದ್ರಾ ಯೋಜನೆಗಳು ಕೈಗಾರಿಕೆ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.

ಎನ್‍ಸಿಸಿ ಕೆಡೆಟ್‍ಗಳು ಕೌಶಲದ ಮಹತ್ವ ಅರಿಯಬೇಕು. ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಅಧ್ಯಕ್ಷತೆ ವಹಿಸಿದ್ದ ಕೆಆರ್‍ಇ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ ಹೇಳಿದರು.

ಕೌಶಲ ಇದ್ದವರಿಗೆ ಎಲ್ಲೆಡೆ ಬೇಡಿಕೆ ಇದೆ. ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಜಿಲ್ಲೆಯಲ್ಲಿ ವೃತ್ತಿ ಕೌಶಲ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಲೋಕೇಶ ಮಾನಸಿಂಗ್ ತಿಳಿಸಿದರು.

ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಕರು ಸರ್ಕಾರದ ಯೋಜನೆಗಳ ಲಾಭ ಪಡೆದು, ಸಬಲರಾಗಬೇಕು ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಹೇಳಿದರು.

ಯುವಕರು ಉನ್ನತ ಗುರಿ ಇಟ್ಟುಕೊಳ್ಳಬೇಕು. ಛಲದೊಂದಿಗೆ ಗುರಿ ತಲುಪಬೇಕು ಎಂದು ವಕೀಲ ಗುರುನಾಥ ರಾಜಗೀರಾ ತಿಳಿಸಿದರು.

ಮೇರಾ ಯುವ ಯುವ ಭಾರತ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪುಸ್ತಕ ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಉದ್ಯೋಗ ಅಭಿವೃದ್ಧಿ ಪ್ರತಿನಿಧಿ ವೀರಶೆಟ್ಟಿ, ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಮತ್ತಿತರರು ಇದ್ದರು.

ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಶ್ವಿನ್ ಚೌಹಾಣ್ ಸ್ವಾಗತಿಸಿದರು. ಪ್ರವೀಣ್ ಜೀರ್ಗೆ ನಿರೂಪಿಸಿದರು. ಸೋಮನಾಥ ವಂದಿಸಿದರು.

32 ಕರ್ನಾಟಕ ಬಟಾಲಿಯನ್ ಕಲಬುರಗಿ, ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಹಾಗೂ ಮೇರಾ ಯುವ ಭಾರತ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.