ಜಿಲ್ಲೆ

ಶಾದಿ ಮಹಲ್ ಅನುದಾನ ದುರುಪಯೋಗ: ದೂರು

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಿಸದೆ ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ಆರೋಪಿಸಿದೆ.

ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್ ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಶಾದಿ ಮಹಲ್‍ಗೆ ರೂ. 50 ಲಕ್ಷ ಮಂಜೂರಾಗಿದ್ದು, 2017-18 ರಲ್ಲಿ ರೂ. 20 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ, ಏಳು ವರ್ಷ ಕಳೆದರೂ ಕಟ್ಟಡ ನಿರ್ಮಾಣ ಮಾಡಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಶಾದಿ ಮಹಲ್‍ಗೆ ಸಂಬಂಧಿಸಿದಂತೆ ಸೇನೆಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ್ ಅವರ ವಿರುದ್ಧ ದೂರು ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ  ತನಿಖಾಧಿಕಾರಿಯನ್ನು ನೇಮಕ ಮಾಡಿದ್ದರು. ಅಷ್ಟೂರಿನಲ್ಲಿ ಯಾವುದೇ ಶಾದಿ ಮಹಲ್ ನಿರ್ಮಿಸಲಾಗಿಲ್ಲ ಎಂದು ತನಿಖಾಧಿಕಾರಿ ವರದಿ ನೀಡಿದ್ದಾರೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಪಾದಿಸಿದ್ದಾರೆ.

ಪ್ರಕರಣ ಸಂಬಂಧ ಕೂಡಲೇ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.