ಜಿಲ್ಲೆ

ಕಿಸಾನ್ ಕಾಂಗ್ರೆಸ್ ಮಹಾರಾಷ್ಟ್ರ ಉಸ್ತುವಾರಿಯಾಗಿ ಪ್ರಕಾಶ ಘಾಳೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯ ಮುಖಂಡ ಪ್ರಕಾಶ ಘಾಳೆ ಅವರನ್ನು ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಸುಖಪಾಲ್ ಸಿಂಗ್ ಖೈರಾ ಅವರ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಅಖಿಲೇಶ್ ಶುಕ್ಲಾ ತಿಳಿಸಿದ್ದಾರೆ.

ಔರಾದ್ ತಾಲ್ಲೂಕಿನ ಚಿಮ್ಮೆಗಾಂವ್ ಗ್ರಾಮದವರಾದ ಪ್ರಕಾಶ ಘಾಳೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಪಕ್ಷ ನಿಷ್ಠೆಗೆ ವಿವಿಧ ಹುದ್ದೆಗಳು ಒಲಿದು ಬಂದಿವೆ.

ಸದ್ಯ ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ರಾಷ್ಟ್ರೀಯ ಸಂಯೋಜಕರೂ ಆಗಿರುವ ಅವರು, ಹಿಂದೆ ವಿಭಾಗದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಉತ್ತರಪ್ರದೇಶದ ಆರು ಜಿಲ್ಲೆಗಳ ಉಸ್ತುವಾರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೈತರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದರು. ಅದರ ಫಲವಾಗಿ ಅವರಿಗೆ ಈಗ ಮತ್ತೆ ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ಮಹಾರಾಷ್ಟ್ರದ ಉಸ್ತುವಾರಿ ಹೊಣೆ ಕೊಡಲಾಗಿದೆ.

ತಮ್ಮನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಕ ಮಾಡಿದ್ದಕ್ಕೆ ಘಾಳೆ ಅವರು ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.