ಜಿಲ್ಲೆ

1 ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಚಾಲನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪರಿಸರ ಸಮತೋಲನ ಕಾಪಾಡಲು ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ನೌಬಾದ್‍ನ ಜ್ಞಾನ ಶಿವಯೋಗಾಶ್ರಮದಲ್ಲಿ ಮಾತೆ ಕರುಣಾದೇವಿ ಹೆಸರಲ್ಲಿ 1 ಲಕ್ಷ ಸಸಿ ನೆಡುವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಠ, ಮಂದಿರ, ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಶುದ್ಧ ಗಾಳಿ ಸೇರಿದಂತೆ ಮರ- ಗಿಡಗಳಿಂದ ನಾನಾ ಉಪಯೋಗಗಳು ಇವೆ. ಉತ್ತಮ ಪರಿಸರಕ್ಕೆ ಗಿಡಗಳು ಬಹಳ ಅವಶ್ಯಕವಾಗಿವೆ ಎಂದು ತಿಳಿಸಿದರು.

ಶಿವಯ್ಯ ಸ್ವಾಮಿ ಅವರು ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಇತರೆ ಸಂಘ ಸಂಸ್ಥೆಗಳೂ ಈ ರೀತಿಯ ಅಭಿಯಾನಕ್ಕೆ ಮುಂದಾಗಬೇಕು. ಅರಣ್ಯ ಇಲಾಖೆ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯಿಂದ ‘ಏಕ್ ಲಾಕ್ ಪೇಡ್ ಮಾ ಕೇ ನಾಮ್’ ಘೋಷವಾಕ್ಯದಡಿ ಮಾತೆ ಕರುಣಾದೇವಿ ಅವರ ಹೆಸರಲ್ಲಿ 1 ಲಕ್ಷ ಸಸಿ ನೆಡುವಿಕೆ ಹಾಗೂ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರೂ ಆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.

ಅಭಿಯಾನದ ನಿಮಿತ್ತ ಶ್ರಾವಣದಲ್ಲಿ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ 21 ಸಾವಿರ ಬಿಲ್ವಪತ್ರಿ ಸಸಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಆಶ್ರಮದ ಪೀಠಾಧಿಪತಿ ಡಾ. ರಾಜಶೇಖರ ಶಿವಾಚಾರ್ಯರು ಮಾತನಾಡಿ, ಶಿವಯ್ಯ ಸ್ವಾಮಿ ಅವರು ದೊಡ್ಡ ಪ್ರಮಾಣದಲ್ಲಿ ಸಸಿ ನೆಡುವ ಅಭಿಯಾನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಸಾಂಸ್ಕೃತಿಕ ಭವನ ಗುದ್ದಲಿ ಪೂಜೆಯೂ ನೆರವೇರಿತು. ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಸಾನಿಧ್ಯ ವಹಿಸಿದ್ದರು.

ಗಂಗಾಧರ ಸ್ವಾಮಿ ಧನ್ನೂರ, ಮುಖಂಡ ಭೀಮಸೇನರಾವ್ ಸಿಂಧೆ, ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಎನ್. ಯರಡೊಣೆ, ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್, ಉಪ ವಲಯ ಅರಣ್ಯ ಅಧಿಕಾರಿ ಹಾವಪ್ಪ, ಪ್ರಮುಖರಾದ ವರದಯ್ಯ ಸ್ವಾಮಿ, ಮಹೇಶ ಪಾಟೀಲ, ನಾಗರಾಜ ಮಠ, ಶಿವಶಂಕರ ಬೆಳಮಗಿ, ಮಹಾಂತೇಶ ಬಿರಾದಾರ, ಭಕ್ತಿ ದಾಸೋಹಿ ಬಸವರಾಜ ಭಂಗೂರೆ, ಮಹಾದೇವಪ್ಪ ಭಂಗೂರೆ, ಕಂಟೆಪ್ಪ ಭಂಗೂರೆ, ಸಂಗಮೇಶ ಹುಮನಾಬಾದೆ, ಮಹಾಂತೇಶ ಡೊಂಗರಗಿ, ಬಸವರಾಜ ಹಾಲಹಳ್ಳಿ, ಕುಪೇಂದ್ರಪ್ಪ ಚಿತ್ರದುರ್ಗ, ರಮೇಶ ಅರಳಿ, ಮಲ್ಲಪ್ಪ ಬಿರಾದಾರ, ಚಂದ್ರಕಾಂತ ಬಿರಾದಾರ ಮತ್ತಿತರರು ಇದ್ದರು.

ಬಸವರಾಜ ಹಳ್ಳಿ ನಿರೂಪಿಸಿದರು. ಪ್ರಭು ತರನಳ್ಳಿ ವಂದಿಸಿದರು.

ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಈಶ್ವರಿ ಮಹಿಳಾ ಮಂಡಳ, ಅರಣ್ಯ ಇಲಾಖೆ, ಮೈ ಭಾರತ ಹಾಗೂ ಆರತಿ ವಿಕಾಸ ಮಹಿಳಾ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.