ಬೀದರ್: ಖಾಲಿ ಇರುವ ಬೀದರ್ ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರ ಹುದ್ದೆಗೆ ಅರ್ಹರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮದರ್ ಖಾನ್ ಅಲಿಖಾನ್ ಪಠಾಣ್ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಈ ಹಿಂದಿನ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರು ಜೂನ್ 30 ರಂದು ನಿವೃತ್ತಿ ಹೊಂದಿರುವ ಕಾರಣ ಹುದ್ದೆ ಖಾಲಿಯಾಗಿದೆ ಎಂದು ತಿಳಿಸಿದರು.
2025-26ನೇ ಸಾಲಿನ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಲು ತಾಲ್ಲೂಕಿನ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹುದ್ದೆಯ ಪ್ರಭಾರ ವಹಿಸಬೇಕು ಎಂದು ಬೇಡಿಕೆ ಮಂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಸಂಘದಿಂದ ಸತ್ಕರಿಸಿದರು.
ತಮ್ಮ ಬೇಡಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಪಂದಿಸಿದ್ದು, ಶೀಘ್ರದಲ್ಲೇ ಸೇವಾ ಜೇಷ್ಠತೆ ಆಧರಿಸಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ತಾಲ್ಲೂಕು ದೈಹಿಕ ವಿಷಯ ಪರಿವೀಕ್ಷಕ ಹುದ್ದೆಯ ಪ್ರಭಾರ ವಹಿಸುವ ಭರವಸೆ ನೀಡಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಬಿ. ಸೂರ್ಯವಂಶಿ ತಿಳಿಸಿದ್ದಾರೆ.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಾಂತಕುಮಾರ ಎಂ. ಜೈದೊಡ್ಡೆ, ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಡೊಂಬಾಳೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಕ್ಲೆಮೆಂಟ್‍ರಾಜ್, ಉಪಾಧ್ಯಕ್ಷ ವಿಜಯಕುಮಾರ ಮಹಿಂದ್ರಕರ್, ಪ್ರಧಾನ ಕಾರ್ಯದರ್ಶಿ ಹಾಜಿ ಸಾಬ್, ಅರವಿಂದ ಶಿಂದೆ, ದೀನೆ ಮತ್ತಿತರರು ಇದ್ದರು.