ಬೀದರ್: ಸದ್ಭಾವನಾ ಮಂಚ್ ನಗರದಲ್ಲಿ ನಡೆಸಿದ 'ಸದ್ಭಾವನಾ ನಡಿಗೆ' ಸಾರ್ವಜನಿಕರ ಗಮನ ಸೆಳೆಯಿತು.
ಮಹಮೂದ್ ಗವಾನ್ ಮದರಸಾದಿಂದ ಆರಂಭಗೊಂಡ ನಡಿಗೆ ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯಗೊಂಡಿತು.
ನಡಿಗೆಯಲ್ಲಿ ಪಾಲ್ಗೊಂಡವರು ‘ಒಂದು ರಾಷ್ಟ್ರ-ಒಂದು ಧ್ವನಿ- ಒಂದು ಏಕತೆ', 'ಹಲವು ಧರ್ಮಗಳು ಒಂದೇ ಮಾನವೀಯತೆ', 'ದ್ವೇಷವಲ್ಲ; ಪ್ರೀತಿಯನ್ನು ಹರಡೋಣ', 'ಪ್ರತಿಯೊಂದು ಧರ್ಮವೂ ಒಂದು ಹೂವಂತೆ ಶಾಂತಿಯ ತೋಟದಲ್ಲಿ ಜತೆಗೂಡಿ ಅರಳೋಣ', 'ಶಾಂತಿಯಲ್ಲಿ ಜೊತೆಗೂಡಿ ನಡೆಯೋಣ- ಭಾತೃತ್ವವೇ ನಮ್ಮ ಶಕ್ತಿ', 'ಮಾನವೀಯತೆಯ ಮನೆಯಲ್ಲಿ ದ್ವೇಷಕ್ಕೆ ಜಾಗವಿಲ್ಲ', 'ದಂಗೆ ಬೇಡ, ಹಕ್ಕುಗಳು ಮತ್ತು ಗೌರವ ಬೇಕು', 'ಏಕತೆ ನಮ್ಮ ಶಕ್ತಿ, ವಿಭಜನೆ ನಮ್ಮ ನಾಶ, ಎಲ್ಲರಿಗೂ ಸಾಮರಸ್ಯವೇ ಬೇಕು' ಎಂಬಿತ್ಯಾದಿ ಬರಹ ಹೊಂದಿದ್ದ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಘೋಷ ವಾಕ್ಯಗಳನ್ನು ಮೊಳಗಿಸಿದರು.
ನಡಿಗೆ ಬಳಿಕ ಮಂಚ್ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಮನವಿ ಸಲ್ಲಿಸಿದರು.
ದೇಶ, ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ದ್ವೇಷ, ತಾರತಮ್ಯ, ಕೊಲೆ, ಗುಂಪು ಕೊಲೆ, ಆರ್ಥಿಕ ಬಹಿಷ್ಕಾರ, ಕೋಮು ಗಲಭೆಯಂತಹ ಸಾಮಾಜಿಕ ಅನಿಷ್ಠಗಳು ಜರುಗುತ್ತಿದ್ದು, ಇವುಗಳನ್ನು ತಡೆಯಲು ಸರ್ಕಾರ ಹಾಗೂ ನಾಗರಿಕರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಸಾಮಾಜಿಕ ಅಶಾಂತಿ, ಕೋಮು ಸೌಹಾರ್ದ ಕೆಡಿಸುವ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಹೊಣೆಗಾರರ ಬೇಜವಾಬ್ದಾರಿ ಹೇಳಿಕೆ ತಡೆಯಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲ ತಾಣದಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮ ಜರುಗಿಸಬೇಕು. ಂಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಸರ್ವ ಧರ್ಮ ಹಾಗೂ ಸಮುದಾಯಗಳ ಮುಖಂಡರ ಸಭೆ ಕರೆದು ಪರಿಸ್ಥಿತಿ ತಿಳಿಗೊಳಿಸಬೇಕು. ಆಗಸ್ಟ್ 20 ರಂದು ಸದ್ಭಾವನಾ ದಿನ ಅರ್ಥಪೂರ್ಣವಾಗಿ ಆಚರಿಸಬೇಕು. ಸದ್ಭಾವನೆ ಕುರಿತು ನಿಬಂಧ, ಭಾಷಣ, ಓಟದ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಬೇಕು. ಕೋಮು ಸೌಹಾರ್ದಕ್ಕೆ ಶ್ರಮಿಸುವ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರೋತ್ಸಾಹಿಸಬೇಕು. ಯಾವುದೇ ಧರ್ಮ ಗ್ರಂಥ ಹಾಗೂ ಮಹಾ ಪುರುಷರನ್ನು ಅವಮಾನಿಸಿ ಮಾತನಾಡುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹಾಗೂ ಇತರ ಮಠಾಧೀಶರು ಸಸಿಗೆ ನೀರೆರೆದು ನಡಿಗೆಗೆ ಚಾಲನೆ ನೀಡಿದರು.
ಮಾತೆ ಸತ್ಯದೇವಿ, ಫಾದರ್ ಕ್ಲೇರಿ ಡಿಸೋಜಾ, ಫಾದರ್ ವಿಲ್ಸನ್ ಫರ್ನಾಂಡೀಸ್, ಭಂತೆ ಜ್ಞಾನಸಾಗರ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ವಿಜಡಂ ಕಾಲೇಜು ಅಧ್ಯಕ್ಷ ಮಹಮ್ಮದ್ ಆಸಿಫೊದ್ದೀನ್, ಸದ್ಭಾವನಾ ಮಂಚ್ ಸಂಚಾಲಕ ಗುರುನಾಥ ಗಡ್ಡೆ, ಸಹ ಸಂಚಾಲಕ ಮಹಮ್ಮದ್ ನಿಜಾಮುದ್ದೀನ್, ಪ್ರಮುಖರಾದ ಬಾಬುರಾವ್ ಹೊನ್ನಾ, ವಿಜಯಕುಮಾರ, ಪಾಸ್ಟರ್ ವಿಜಯಕುಮಾರ ಡೇವಿಡ್, ಮೌಲಾನಾ ತಸದ್ದುಕ್ ನದ್ವಿ, ಮೌಲಾನಾ ಮುಜೀಬುರ್ರಹಮಾನ್, ಖಾಸ್ಮಿ, ಮೌಲಾನಾ ಮೋನಿಸ್ ಕಿರ್ಮಾನಿ, ಮಹಮ್ಮದ್ ಮೌಅಝಮ್, ಶ್ರೀಕಾಂತ ಸ್ವಾಮಿ, ಓಂಪ್ರಕಾಶ ರೊಟ್ಟೆ, ಜಗದೀಶ್ವರ್ ಬಿರಾದಾರ, ವಿಠ್ಠಲದಾಸ್ ಪ್ಯಾಗೆ, ಮುಜಾಹಿದ್ ಪಾಶಾ ಖುರೇಶಿ, ಡಾ. ದೀಪಾ ನಂದಿ, ಅಸ್ಮಾ ಸುಲ್ತಾನಾ, ಸೈಯಿದಾ ಉಮ್ಮೆ ಹಬೀಬಾ, ಡಾ. ಬುಶ್ರಾ ಐಮನ್, ಎಹತೆಶಾಮುದ್ದೀನ್, ಡಾ. ಮಕ್ಸೂದ್ ಚಂದಾ, ಮನ್ಸೂರ್ ಅಹಮ್ಮದ್ ಖಾದ್ರಿ ಮೊದಲಾದವರು ನಡಿಗೆಯಲ್ಲಿ ಪಾಲ್ಗೊಂಡಿದ್ದರು.